ಶಿವಮೊಗ್ಗ : ಕೋವಿಡ್ ಸಮಯದಲ್ಲಿನ ಖರೀದಿ ಸಂಬಂಧ ತನಿಖೆಗೆ ಎಸ್ಐಟಿ ರಚನೆ ಆಗಿರುವ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ. ಅದು ದುರುದ್ದೇಶದಿಂದ ಕೂಡಿದ ಆರೋಪವಾಗಿದೆ. ಕಾನೂನು ಚೌಕಟ್ಟಿನಲ್ಲಿ ಅದನ್ನು ಎದುರಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಬದುಕಿ ಉಳಿಯುವುದೇ ಕಷ್ಟ ಎನ್ನುವ ಸಂದರ್ಭ ಬಂದಾಗ ಯಾವುದೇ ಔಷಧ ಸಿಗುವ ಸಾಧ್ಯತೆಯೇ ಇರಲಿಲ್ಲ. ಹೊರಗಿನಿಂದ ಔಷಧ ತಂದು ಜನರ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಷ್ಟು ವರ್ಷದ ನಂತರ ಇದು ಒಂದು ಹಗರಣ ಅಂತ ಗೊಂದಲವನ್ನುಂಟು ಮಾಡುವ ಪ್ರಯತ್ನವನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುವಂತಹ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ನಾವು ನಮ್ಮ ಕೆಲಸ ಮಾಡಿದ್ದೇವೆ. ಜನ ಮೆಚ್ಚುವಂತಹ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಮುಡಾದಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ : ಮುಡಾ ಹಗರಣದಿಂದ ತಪ್ಪಿಸಿಕೊಳ್ಳಲು ಸಿಎಂ ಈ ರೀತಿಯ ಹೇಳಿಕೆ ಹಾಗೂ ಆರೋಪ ಮಾಡುತ್ತಿದ್ದಾರೆ. ಸಿಎಂ ವಿರುದ್ದ ಸಾಕಷ್ಟು ದೂರುಗಳಿವೆ. ನಾಲ್ಕೈದು ದಿನಗಳಲ್ಲಿ ಅವರನ್ನು ತನಿಖೆಗೆ ಕರೆದಾಗ ಸತ್ಯ ಗೊತ್ತಾಗಲಿದೆ ಎಂದರು.