ಬೆಂಗಳೂರು: ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೆಸರು ಹೇಳುವ ತಾಕತ್ತು ಕಾಂಗ್ರೆಸ್ ನಾಯಕರಿಗೆ ಇದೆಯಾ?. ಹಣ, ಹೆಂಡದ ದರ್ಬಾರ್ ನಡೆಸಿ ಅಧಿಕಾರ ಹಿಡಿಯುವ ಭರವಸೆಯಲ್ಲಿ ಆ ಪಕ್ಷದ ನಾಯಕರಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ. ಇದೇ ವೇಳೆ, ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಅವರನ್ನು ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅರಮನೆ ಮೈದಾನದಲ್ಲಿ ಇಂದು ನಡೆದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು?. ಯಾರಾದರೂ ಹೇಳುತ್ತಾರಾ, ತಾಕತ್ತಿದೆಯಾ?. ಹಣ ಹೆಂಡದ ಮೇಲೆ ತುಘಲಕ್ ದರ್ಬಾರ್ ನಡೆಸಿ ಅಧಿಕಾರ ಹಿಡಿಯುವ ಭರವಸೆಯಲ್ಲಿದ್ದಾರೆ. ರಾಜ್ಯದ ಉದ್ದಗಲಕ್ಕೆ ನಾವೆಲ್ಲಾ ಹಿರಿಯ ಮುಖಂಡರ ಜತೆ ವಿಧಾನಸಭಾ ಕ್ಷೇತ್ರಗಳಿಗೆ ಬಂದು ಕಾರ್ಯಕರ್ತರ ಸಭೆ ನಡೆಸಲಿದ್ದೇವೆ. ಈ ಬಾರಿ 28 ಕ್ಷೇತ್ರ ಗೆದ್ದು ದೆಹಲಿಗೆ ಆ 28 ಸದಸ್ಯರನ್ನು ಕರೆದುಕೊಂಡು ಬರುತ್ತೇನೆ ಎಂದು ಅಮಿತ್ ಶಾ ಅವರಿಗೆ ಭರವಸೆ ನೀಡಿದರು.
ಮೋದಿ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ. ನಾವೆಲ್ಲಾ ಒಟ್ಟಾಗಿ ಒಂದಾಗಿ ಕೆಲಸ ಮಾಡೋಣ. ರಾಜ್ಯ ಪ್ರವಾಸ ಮಾಡುತ್ತೇನೆ, 82 ವರ್ಷವಾದರೂ ಮನೆ ಸೇರುವ ಪ್ರಶ್ನೆಯೇ ಇಲ್ಲ. ತುಘಲಕ್ ಸರ್ಕಾರವನ್ನು ಜನರಿಗೆ ತಿಳಿಸೋಣ. ಎಲ್ಲಿ ಕರೆಯುತ್ತೀರೋ ಅಲ್ಲಿಗೆ ಬರಲಿದ್ದೇನೆ. ಈ ಸರ್ಕಾರ ಮಾಡಿದ ಅನ್ಯಾಯವನ್ನು ವಿವರಿಸೋಣ. ಚುನಾವಣೆ ಮುಗಿಯುವವರೆಗೂ ಮನೆ ಸೇರಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಿದರೆ ನಮಗೆ ಗೆಲುವು ಕಷ್ಟವಲ್ಲ, ಮಾದರಿ ರಾಜ್ಯವಾಗಿ ಮಾಡಲು ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.