ಬೆಂಗಳೂರು:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ವಿರೋಧ ಪಕ್ಷದ ಕೆಲ ರಾಜಕೀಯ ಮುಖಂಡರು ದೊಡ್ಡಮಟ್ಟದ ಸಂಚು ರೂಪಿಸಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ತನ್ನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು ಮಾಡಿ ಘನತೆಗೆ ಧಕ್ಕೆ ತರುವ ಕಾರ್ಯ ನಡೆಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಈಗಾಗಲೇ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಅರ್ಜಿದಾರರು ಸಭೆಯೊಂದರಲ್ಲಿ ಭಾಗಿಯಾಗಲು ದೆಹಲಿಯಲ್ಲಿ ಉಳಿದಿದ್ದಾರೆ. ಅಲ್ಲದೆ, ಜೂನ್ 12ರ ಬದಲಿಗೆ 17ರಂದು ವಿಚಾರಣೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ.
ಪ್ರಕರಣ ಸಂಬಂಧ ತನಿಖಾಧಿಕಾರಿಗಳು 2024ರ ಮಾರ್ಚ್ 28ರಂದು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದು, ಅದರಂತೆ ಏಪ್ರಿಲ್ 12ರಂದು ತನಿಖೆಗೆ ಹಾಜರಾಗಲಾಗಿದೆ. ಈ ವೇಳೆ ಯಾವುದೇ ಹೇಳಿಕೆಗಳನ್ನು ದಾಖಲಿಸಿಕೊಳ್ಳದ ತನಿಖಾಧಿಕಾರಿಗಳು ಕೇವಲ ಧ್ವನಿ ಮಾದರಿಯನ್ನು ಮಾತ್ರ ಪಡೆದು ಕಳುಹಿಸಿದ್ದಾರೆ. ಆದರೆ, ಅರ್ಜಿದಾರರು ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ತಿಳಿಸಿ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವಿಚಾರಣಾ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯಿದೆ. ಆದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಅರ್ಜಿದಾರರು 81 ವರ್ಷ ವಯಸ್ಸಿನವರಾಗಿದ್ದು, ಹಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ, ಕಾಲ ಕಾಲಕ್ಕೆ ವೈದ್ಯರ ಭೇಟಿ ಮಾಡಿ ಔಷಧಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಅರ್ಜಿದಾರರ ವಿರುದ್ಧ ಮರಣದಂಡನೆಯಂತಹ ಆರೋಪ ಇಲ್ಲ. ಕೇವಲ ಏಳು ವರ್ಷಗಳ ಶಿಕ್ಷೆಯಾಗುವಂತಹ ಆರೋಪವಿದ್ದು, ವಿಚಾರಣಾ ಸಂದರ್ಭದಲ್ಲಿ ಬಂಧನ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಜತೆಗೆ, ಪ್ರಸ್ತುತ ಪ್ರಕರಣ ಐಪಿಸಿ 354(ಎ) ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಬರುವುದಿಲ್ಲ. ಅಲ್ಲದೆ, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಘಟನೆ ನಡೆದ ದಿನದಂದು ಸ್ಥಳದಲ್ಲಿದ್ದ ಅರ್ಜಿದಾರರ ಮನೆಯ ಸಿಬ್ಬಂದಿ ಆ ರೀತಿಯ ಕೃತ್ಯ ನಡೆದಿಲ್ಲ ಎಂಬುದಾಗಿ ಅರ್ಜಿಯಲ್ಲಿ ವಿವರಿಸಿದ್ದಾರೆ.