ಬೆಳಗಾವಿ:ಹತ್ತು ವರ್ಷದಲ್ಲಿ ಜನ ಅಮೃತಕಾಲ ನೋಡಲಿಲ್ಲ, ಅನ್ಯಾಯ ಕಾಲ ನೋಡಿದ್ದಾರೆ. ಮೋದಿ ಹತ್ತು ವರ್ಷದ ಆಡಳಿತದ ಈ ದಶಕ ಬರ್ಬಾದ್ ದಶಕ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ. ಮಹಿಳೆಯರು, ರೈತರು, ಕಾರ್ಮಿಕರಿಗೆ ನ್ಯಾಯ ಕೊಡುವ 25 ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆಯಾಗಿದೆ ಎಂದು ಹೇಲಿದರು.
ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಕಾಂಗ್ರೆಸ್ಗೆ ವೋಟ್ ಕೊಡಿ ಎಂದ ಬಿ.ಕೆ.ಹರಿಪ್ರಸಾದ್, ಬಿಜೆಪಿಯವರು 400 ಗೆಲ್ತಾರೋ ಅಥವಾ 420 ಗೆಲ್ತಾರೋ ಗೊತ್ತಿಲ್ಲ. ಆದರೆ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವಷ್ಟು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ಮುಸ್ಲಿಂ ಲೀಗ್ ಪಾರ್ಟಿ ಮೇಲೆ ಬಿಜೆಪಿಯವರಿಗೆ ಬಹಳ ಪ್ರೀತಿ. ಫಜಲ್ ಹಕ್ ಅವರು ಪಾಕಿಸ್ತಾನ ಆಗಬೇಕು ಅಂತ ಹೇಳಿದ್ದರು. ಹಿಂದೂ ಮಹಾಸಭಾದವರು ಮುಸ್ಲಿಂ ಲೀಗ್ ಜತೆ ಸೇರಿಕೊಂಡಿದ್ದರು. ಮುಸ್ಲಿಂ ಲೀಗ್ ಮೇಲೆ ಪ್ರೀತಿ ಇದ್ದರೆ ಅವರ ಜತೆಗೆ ನೀವು ಹೋಗಿ. ಸಮಾನತೆ ವಿರೋಧಿಗಳು ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಯತ್ನಾಳ್ ಅವರು ನಾವೆಲ್ಲಾದ್ರೂ ಹೇಳಿದ್ರೆ ತೋರಿಸಲಿ ಎಂದು ಸವಾಲು ಹಾಕಿದರು.
ಪೆನ್‌ಡ್ರೈವ್‌ನಲ್ಲಿದೆ ಭಿನ್ನಾಭಿಪ್ರಾಯ!: ನಾನು ಸ್ಟಾರ್ ಕ್ಯಾಂಪೇನರ್. ನನ್ನನ್ನು ಯಾರೂ ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ನನ್ನ ಉಪಯೋಗವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತದೆ. ವೈಯಕ್ತಿಕ ರಾಜಕಾರಣ ಬೇರೆ. ಇದು ಕಾಂಗ್ರೆಸ್ ಪಕ್ಷದ ದೇಶದ ರಾಜಕಾರಣ. ಏನೇ ಭಿನ್ನಾಭಿಪ್ರಾಯ ಇದ್ದರೂ ಪೆನ್ ಡ್ರೈವ್ನಲ್ಲಿಟ್ಟುಕೊಂಡಿದ್ದು, ಆಮೇಲೆ ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ:ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮ: ಬಿ ಕೆ ಹರಿಪ್ರಸಾದ್