ಹುಬ್ಬಳ್ಳಿ:ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಉಣಕಲ್ ಹತ್ತಿರದ ಅಚ್ಚವ್ವನ ಕಾಲೋನಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ.
ಪ್ರಕಾಶ ಬಾರಕೇರ (36), ಶಂಕರ ಚವ್ಹಾಣ (29), ಲಿಂಗರಾಜ ಬೀರನೂರ (19), ಸಂಜಯ ಸವದತ್ತಿ (18), ರಾಜು ಮೂಗೇರಿ (16), ನಿಜಲಿಂಗಪ್ಪ ಬೇಪುರಿ (58), ಮಂಜುನಾಥ್ ವಾಗ್ಮೋಡೆ (22), ತೇಜಸ್ವರ ಸಾತ್ರಿ (26) ಅವರು ತೀವ್ರವಾಗಿ ಗಾಯಗೊಂಡಿದ್ದರೆ, ವಿನಾಯಕ ಬಾರಕೇರ (11 ವರ್ಷ) ಅಲ್ಪ ಪ್ರಮಾಣದ ಸುಟ್ಟ ಗಾಯಗಳಾಗಿವೆ.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (ETV Bharat) ಎಂದಿನಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ವ್ರತವನ್ನು ಮುಗಿಸಿ, ಅಯ್ಯಪ್ಪನಿಗೆ ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್ಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗಿದೆ. ದೇವಸ್ಥಾನದಲ್ಲಿ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 9 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡು ಅಯ್ಯಪ್ಪ ಮಾಲಾಧಾರಿಗಳು ಗಾಯಾಗೊಂಡ ವಿಷಯ ತಿಳಿಯುತ್ತಿದಂತೆ ಕೇಂದ್ರ ಸಚಿವಿ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಕೆಎಂಸಿಆರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಲಿಂಡರ್ ಲೀಕ್ ಪ್ರಕರಣ ಘಟನೆಯಲ್ಲಿ 9 ಜನ ಗಾಯಗೊಂಡಿದ್ದಾರೆ. ಈ ಪೈಕಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಅವರಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕು. ಗಾಯಳುಗಳು ಬೇಗನೆ ಗುನುಮುಖರಾಗಲಿ ಎಂದರು.
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ಮಧ್ಯರಾತ್ರಿ ಘಟನೆ ನಡೆದಿದೆ. ಗ್ಯಾಸ್ ಸೋರಿಕೆಯಿಂದ ಅವಘಡ ಸಂಭವಿಸಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಕಡೆ ಅವರನ್ನ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ಅವಶ್ಯಕತೆ ಇಲ್ಲ. ಇಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಚಿಕಿತ್ಸೆ ವೇಳೆ ಕಿಮ್ಸ್ ನಿರ್ಲಕ್ಷ್ಯ ವಿಚಾರ ಕುರಿತಂತೆ ಮಾಹಿತಿ ತರಿಸಿಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಸೋಮವಾರ ಬೆಳಗಿನಜಾವ 1:30 ರ ಸುಮಾರಿಗೆ ಅವಘಡ ನಡೆದಿದೆ. ಒಟ್ಟು 14 ಜನ ಮಾಲಾಧಿಗಾರಿಗಳು ಆ ಕಟ್ಟಡದಲ್ಲಿ ಮಲಗಿದ್ದರು. ಮೊದಲನೆಯ ಮಹಡಿಯಲ್ಲಿದ್ಧ 9 ಜನರಿಗೆ ಗಾಯಗಳಾಗಿವೆ. ನೆಲಮಹಡಿಯಲ್ಲಿದ್ದ ನಾಲ್ವರಿಗೆ ಯಾವುದೇ ಗಾಯಗಳಾಗಿಲ್ಲ. ಇವರಲ್ಲಿ ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದರು.
ಕೆಎಂಸಿಆರ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಅವರು ಪ್ರತಿಕ್ರಿಯೆ ನೀಡಿದ್ದು, ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ನುರಿತ ಹಾಗೂ ಹಿರಿಯ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ನಿಂದ ಗಾಯಾಳುಗಳ ಚಿಕಿತ್ಸೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ನಮ್ಮ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ಬೇಕಾದ ಎಲ್ಲಾ ಔಷಧಿ ಲಭ್ಯವಿದೆ ಎಂದರು.
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಗಾಯಾಳುಗಳಿಗೆ ಯಾವುದೇ ರೀತಿಯಾಗಿ ಪ್ರಾಣ ಹಾನಿ ಆಗುವುದಿಲ್ಲ. ಏಕಂದ್ರೆ ಅಯ್ಯಪ್ಪನ ಸೇವೆ ಮಾಡಿದ್ದರಿಂದ ಆ ಭಗವಂತ ಅವರನ್ನು ಕಾಪಾಡುತ್ತಾನೆ. ಗಾಯಾಳು ಮಾಲಾಧಾರಿಗಳ ಆರೋಗ್ಯ ಚೇತರಿಕೆಯಾಗಲಿ ಎಂದು ನಾಳೆ ಅಯ್ಯಪ್ಪನ ವಿಶೇಷ ಪೂಜೆ ಮಾಡಲಾಗುತ್ತದೆ. ಸರ್ಕಾರ ಗಾಯಾಳುಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ಗಾಯಾಳುಗಳ ಚಿಕಿತ್ಸೆಗೆ ತಲಾ 10 ಸಾವಿರ ರೂಪಾಯಿ ಹಣವನ್ನು ಜಿಲ್ಲಾ ಕಾಂಗ್ರೆಸ್ ನೀಡಿದೆ. ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ್, ನಗರಾಧ್ಯಕ್ಷ ಅಲ್ತಾಫ್ ಹಳ್ಳೂರು ಅವರು ಹಣ ವಿತರಣೆ ಮಾಡಿದರು.
ಇದನ್ನೂ ಓದಿ:ಭದ್ರಾವತಿ ರೈಸ್ ಮಿಲ್ ಬಾಯ್ಲರ್ ಸ್ಪೋಟ ಪ್ರಕರಣ: ಆಪರೇಟರ್ ರಘು ಶವವಾಗಿ ಪತ್ತೆ - RICE MILL BOILER EXPLOSION