ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯೆ (ETV Bharat) ಬೆಂಗಳೂರು:ಸ್ಫೀಕರ್ ಪೀಠದಲ್ಲಿ ತೆಗೆದಿರುವ ಫೋಟೋಗೆ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದು, "ಇದು ಅಧಿವೇಶನ ಆರಂಭವಾಗುವ ಮುನ್ನ ಸದನದ ಒಳಗಡೆ ತೆಗೆದ ಫೊಟೋ" ಎಂದು ಹೇಳಿದ್ದಾರೆ.
"ಸದನ ನಡೆಯುವಾಗ ತೆಗೆದ ಫೋಟೋ ಅಲ್ಲ. ಅಧಿವೇಶನ ಆರಂಭವಾಗುವ ಮುನ್ನ ಸದನದಲ್ಲಿ ಕೆಲಸ ನಡೆಯುತ್ತಿರುವಾಗ ರಾತ್ರಿ 10 ಗಂಟೆಗೆ ತಪಾಸಣೆಗೆ ಹೋಗಿದ್ದೆ. ಆಗ ಅಲ್ಲಿಗೆ ಆಗಮಿಸಿದ್ದವರು ನನ್ನೊಂದಿಗೆ ಫೋಟೋ ತೆಗೆದರು" ಎಂದು ತಿಳಿಸಿದರು.
ಏನಿದು ಫೊಟೋಶೂಟ್ ವಿವಾದ?:ಸ್ಪೀಕರ್ ಪೀಠದಲ್ಲಿ ಕುಳಿತಿದ್ದಾಗ ದ.ಕನ್ನಡ ಜಿಲ್ಲಾ ಸ್ಥಳೀಯ ಕಾಂಗ್ರೆಸ್ ಮುಖಂಡರು ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆಗೆ ಗುರಿಯಾಗಿತ್ತು. ಫೋಟೋದಲ್ಲಿ ಯು.ಟಿ.ಖಾದರ್ ಸ್ಪೀಕರ್ ಪೀಠದಲ್ಲಿ ಕುಳಿತಿದ್ದು, ಪಕ್ಕದಲ್ಲಿ ಕೆ.ಅಶ್ರಫ್ ಹಾಗೂ ನವೀನ್ ಡಿಸೋಜಾ ಎಂಬವರಿದ್ದರು. ಇದು ವಿಧಾನಸಭೆಯ ನಿಯಮಾವಳಿಗಳ ಉಲ್ಲಂಘನೆಯಲ್ಲವೇ?, ಸ್ಪೀಕರ್ ಪೀಠದ ಗೌರವದ ನಿಟ್ಟಿನಲ್ಲಿ ಇದು ಸರಿಯಾದ ಕ್ರಮವೇ? ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು.
ನಿಯಮವೇನು?: ವಿಧಾನಸಭೆ ಸಭಾಂಗಣಕ್ಕೆ ಸಾರ್ವಜನಿಕರಿಗೂ ಪ್ರವೇಶ ಇರುವುದಿಲ್ಲ. ಸ್ಪೀಕರ್ ಅನುಮತಿಯ ಮೇರೆಗೆ ಅಧಿವೇಶನ ಇಲ್ಲದ ವೇಳೆ ಭೇಟಿ ಕೊಡಲು ಅವಕಾಶ ಇದೆ. ಸದನ ನಡೆಯುವ ಸಂದರ್ಭದಲ್ಲಿ ಮಾತ್ರ ಸ್ಪೀಕರ್ ಈ ಪೀಠದ ಮೇಲೆ ಆಸೀನರಾಗಿರುತ್ತಾರೆ.
'ಕೆಟ್ಟ ಸಂಪ್ರದಾಯ ಆರಂಭಿಸಲು ನಾನು ತಯಾರಿಲ್ಲ':ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಕುರಿತು ಖಾದರ್ ಪ್ರತಿಕ್ರಿಯಿಸಿ, "ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಧರಣಿ ಪ್ರಜಾಪ್ರಭುತ್ವದ ಸೌಂದರ್ಯ. ಅವರಿಗೆ ಬೇಕಿರುವ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಿಲುವಳಿ ಸೂಚನೆ ಅತ್ಯಗತ್ಯ ಮತ್ತು ತುರ್ತು ಆಗಿರಬೇಕು ಅಥವಾ ಅದು ಸಾರ್ವಜನಿಕ ಮಹತ್ವದ್ದಾಗಿರಬೇಕು. ಹೀಗಾಗಿ, ಸ್ಪೀಕರ್ ಆಗಿ ಸದನದಲ್ಲಿ ಕೆಟ್ಟ ಸಂಪ್ರದಾಯ ಆರಂಭಿಸಲು ನಾನು ತಯಾರಿಲ್ಲ" ಎಂದು ಹೇಳಿದರು.
"ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮತುರ್ತಾಗಿರುವ ಕಾರಣ ಚರ್ಚೆಗೆ ಅವಕಾಶ ನೀಡಿದ್ದೇವೆ. ತನಿಖೆ ನಡೆಯುತ್ತಿದ್ದರೂ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ಇಡಿಗೆ ಸಂಬಂಧಪಟ್ಟ ವಿಚಾರವೂ ತುರ್ತಾಗಿರುವುದರಿಂದ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ. ಶಿವಲಿಂಗೇಗೌಡರ ದೇವರಾಜು ಅರಸು ಟ್ರಕ್ ಟರ್ಮಿನಲ್ ವಿಚಾರದ ಮೇಲಿನ ನಿಲುವಳಿ ಸೂಚನೆ ಚರ್ಚೆಗೆ ಅವಕಾಶ ನೀಡಿದ್ದೇನೆ" ಎಂದರು.
"ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಅಧಿಕಾರಿಗಳ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಇದು ಹಿಂದಿನ ಪ್ರಕರಣ, ಈಗ ಆಗಿರುವುದಲ್ಲ. ಈ ಬಗ್ಗೆ ಸದನದಲ್ಲಿ ನಾನು ಚರ್ಚೆಗೆ ಅವಕಾಶ ನೀಡಿದರೆ ಕೆಟ್ಟ ಸಂಪ್ರದಾಯವಾಗುತ್ತದೆ. ಮುಂದಿನ ಸ್ಪೀಕರ್ ಇದನ್ನೇ ಉದಾಹರಣೆಯಾಗಿ ಉಲ್ಲೇಖಿಸಿ ಅನುಸರಿಸುವ ಸಾಧ್ಯತೆ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ:ಮುಡಾ 'ಹಗರಣ': ಸದನದಲ್ಲೇ ಮಲಗಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ; ಭಜನೆ, ಅಂತ್ಯಾಕ್ಷರಿ ಹಾಡಿದ ಶಾಸಕರು - BJP JDS Night Long Protest