ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಳೆದ ಗುರುವಾರದಿಂದ ವಿಧಾನಸಭೆಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಪ್ರತಿಪಕ್ಷಗಳ ಸದಸ್ಯರು ಇಂದು ವಾಪಸ್ ಪಡೆದುಕೊಂಡಿದ್ದಾರೆ.
ಸದನ ಇಂದು ಬೆಳಗ್ಗೆ ಸೇರಿದಾಗ ಕೂಡಲೇ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಶುಕ್ರವಾರ ಸದನಕ್ಕೆ ಸಕಾಲಕ್ಕೆ ಆಗಮಿಸಿದ ಶಾಸಕರ ಹೆಸರನ್ನು ಓದಿದರು. ಮುಖ್ಯಮಂತ್ರಿಯವರು ಗುರುವಾರ ಉತ್ತರ ನೀಡುವಾಗ ನೀವು ಧರಣಿ ಆರಂಭಿಸಿದ್ದೀರಿ. ಈಗಾಗಲೇ ನೀವು ಪ್ರಸ್ತಾಪ ಮಾಡಿದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಸದನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಸಾರ್ವಜನಿಕ ಮಹತ್ವದ ವಿಚಾರಗಳಿವೆ. ಇಂದು ಗಮನ ಸೆಳೆಯುವ ಸೂಚನಗೆ ಆದ್ಯತೆ ಕೊಡಲಾಗಿದೆ. ಧರಣಿ ವಾಪಸ್ ಪಡೆದು ಸುಗಮ ಕಲಾಪ ನಡೆಸಲು ಸಹಕಾರ ನೀಡುವಂತೆ ಸ್ಪೀಕರ್ ಕೋರಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಆ ಹಣ ಮರಳಿ ಖಜಾನೆಗೆ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ವಿಚಾರವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಸದನದ ಹೊರಗೆ ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಉಳಿದೆಲ್ಲಾ ವಿಚಾರಕ್ಕೂ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡಿದ್ದೇವೆ. ಧರಣಿಯ ನಡುವೆ ಶುಕ್ರವಾರ ಸದನದಲ್ಲಿ ಮಾತನಾಡಿದ ವಿಚಾರವನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಇದರಿಂದ ಸದನಕ್ಕೆ ಅಗೌರವ ತರುವಂತಾಗಿದೆ ಎಂದು ಹೇಳಿದರು.