ರಾಮನಗರ/ಹಾವೇರಿ/ಬಳ್ಳಾರಿ:ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಆಯಾ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಜೊತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಂಡಿವೆ.
ಚನ್ನಪಟ್ಟಣ ಉಪಚುನಾವಣೆ ಮತ ಎಣಿಕೆ: ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೂರು ಕೊಠಡಿಗಳಲ್ಲಿ ನಾಳೆ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ಬೆಳಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ತೆರೆಯಲಾಗುವುದು. 7.30ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದು ಡಿಸಿ ಮಾಹಿತಿ ನೀಡಿದರು.
ಮತ ಎಣಿಕೆಗೆ ಸಕಲ ಸಿದ್ಧತೆ (ETV Bharat) ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,886 (ಶೇ.88.81) ಮತಗಳು ಚಲಾವಣೆಗೊಂಡಿದೆ. 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ಎರಡು ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರದ ಏಜೆಂಟರುಗಳಿಗೂ ಸಹ ಪಾಸ್‌ಗಳನ್ನು ನೀಡಲಾಗಿದೆ. ಮತ ಎಣಿಕೆಗೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಜನ ಏಜೆಂಟರುಗಳು ಇರುತ್ತಾರೆ. ಜಿಲ್ಲೆಯಾದ್ಯಂತ ಶನಿವಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಶಿಗ್ಗಾಂವಿಯಲ್ಲಿ ಸಕಲ ಸಿದ್ಧತೆ:ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಮತ ಏಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ತಿಳಿಸಿದ್ದಾರೆ. ಹಾವೇರಿ ಸಮೀಪದ ಮತ ಏಣಿಕೆ ಕೇಂದ್ರದಲ್ಲಿ ಮಾತನಾಡಿದ ಅವರು ಶನಿವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬರಲಿದೆ ಎಂದರು.
ಹಾವೇರಿ ತಾಲೂಕು ದೇವಗಿರಿ ಗ್ರಾಮದ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. 8 ಗಂಟೆಗೆ ಅಂಚೆ ಮತಗಳ ಎಣಿಕೆ ಶುರುವಾಗುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಳ ಎಣಿಕೆ ನಡೆಯಲಿದೆ. ಇವಿಎಂ ಮತಗಳ ಎಣಿಕೆಗಾಗಿ ಒಟ್ಟು 14 ಟೇಬಲ್ ನಿಗದಿ ಮಾಡಲಾಗಿದೆ. ಒಂದು ಟೇಬಲ್ನಲ್ಲಿ ಅಂಚೆ ಮತ, ಸೇವಾ ಮತದಾರರ ಅಂಚೆ ಮತ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೂ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕ ಹಾಗೂ ಎಣಿಕೆ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ (ETV Bharat) ಬಿಗಿ ಬಂದೋಬಸ್ತ್:ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಾಲ್ವರು ಡಿಎಸ್ಪಿ, 9 ಸಿಪಿಐ, 25 ಪಿಎಸ್ಐ, 29 ಎಎಸ್ಐ, 250 ಹೆಚ್ಸಿ/ಪಿಸಿ ಹಾಗೂ ಎರಡು ಕೆಎಸ್ಆರ್ಪಿ ತುಕಡಿ, ನಾಲ್ಕು ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆಗೆ ಆಗಮಿಸುವ ಏಜೆಂಟರುಗಳಿಗಾಗಿ ಗುರುತಿನ ಚೀಟಿ ಕಡ್ಡಾಯ. ಎಣಿಕೆ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರಕ್ಕೆ ಬರುವ ಚುನಾವಣಾ ಏಜೆಂಟರುಗಳು ಪೆನ್ ಮತ್ತು ಹಾಳೆಗಳನ್ನು ಮಾತ್ರ ತರಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಕತ್ತರಿ/ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತಗಳು, ಲೈಟರ್, ಬೆಂಕಿ ಪೊಟ್ಟಣ, ಗುಟ್ಕಾ, ತಂಬಾಕು, ಸೀಗರೇಟ್ ಹಾಗೂ ಸ್ಪೋಟಕ ಸಾಮಗ್ರಿಗಳು, ಪ್ರತಿಬಂಧಿಸಲ್ಪಟ್ಟ ವಸ್ತುಗಳು ಹಾಗೂ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಸಂಡೂರು ಚುನಾವಣೆಯ ಮತ ಎಣಿಕೆ:ಸಂಡೂರು ವಿಧಾನಸಭೆ ಉಪಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಶೇ.76.02ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯವು ನ.23 ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ರಾಜೇಶ್ ಹೆಚ್.ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೊಂಬೆನಗರಿ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಕ್ಷೇತ್ರದಲ್ಲಿ ಗರಿಗೆದರಿದ ಬೆಟ್ಟಿಂಗ್ ಮಾಫಿಯಾ