ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಪರಿಷತ್ ಮೊಗಸಾಲೆ ಬಳಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ಘಟನೆ ನಡೆದ ದಿನವೇ ಸಿ.ಟಿ.ರವಿ ಅವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ವಿರುದ್ಧ ಹಿರೇಬಾಗೇವಾಡಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat) ಸಿ.ಟಿ.ರವಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಸುವರ್ಣಸೌಧ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಖಾನಾಪುರ ಪೊಲೀಸರು ಪ್ರಕರಣವನ್ನು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಇದೀಗ ಸರ್ಕಾರ ಸಿ.ಟಿ.ರವಿ ವಿರುದ್ಧದ ಪ್ರಕರಣ ಮತ್ತು ಅವರ ಮೇಲಿನ ಹಲ್ಲೆ ಪ್ರಕರಣ ಎರಡನ್ನೂ ಸಿಐಡಿಗೆ ವರ್ಗಾವಣೆ ಮಾಡಿದೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆ ಯತ್ನಿಸಿದ ದೃಶ್ಯಾವಳಿಗಳನ್ನು ಪರಿಶೀಲಿಸಿ ಅದರಲ್ಲಿ ಯಾರಿದ್ದಾರೋ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ನಿನ್ನೆಯಷ್ಟೇ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದರು.
ನನ್ನನ್ನು ಎನ್ಕೌಂಟರ್ ಮಾಡಲು ಪೊಲೀಸರು ಯತ್ನಿಸಿದ್ದರು ಎಂಬ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ. ಸಿ.ಟಿ.ರವಿ ಅವರ ಭದ್ರತೆಯ ದೃಷ್ಟಿಯಿಂದ ಬೇರೆ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಖಾನಾಪುರ ಠಾಣೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಸ್ಥಳಾಂತರಿಸಲು ಯೋಚಿಸಿದೆವು. ಅಲ್ಲದೇ, ದಾರಿಯಲ್ಲಿಯೂ ಕೂಡ ಬಹಳಷ್ಟು ವಾಹನಗಳು ಹಿಂಬಾಲಿಸಿದ್ದರಿಂದ ಮುಂಜಾಗೃತವಾಗಿ ಕೆಲ ಕ್ರಮಕೈಗೊಳ್ಳಲಾಗಿತ್ತು. ಅವರ ಮೇಲೆ ಮತ್ತೆ ಯಾರೂ ಹಲ್ಲೆ ಮಾಡಬಾರದೆಂದು ಈ ರೀತಿ ಮಾಡಿದ್ದೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಬೆಳಗಾವಿ: ಸುವರ್ಣಸೌಧದ ಕಾರಿಡಾರ್ನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ
ಇದನ್ನೂ ಓದಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ; ದಾಖಲೆ ಇದ್ದರೆ ತೋರಿಸಿ ಎಂದ ಸಿ.ಟಿ.ರವಿ