ಕರ್ನಾಟಕ

karnataka

ETV Bharat / state

ಮೇಕೆದಾಟು ಯೋಜನೆ ಸಂಬಂಧ ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ನಿಲುವೇನು?: ಅಶ್ವಥನಾರಾಯಣ ಪ್ರಶ್ನೆ - MEKEDATU PROJECT - MEKEDATU PROJECT

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ

By ETV Bharat Karnataka Team

Published : Mar 21, 2024, 6:25 PM IST

Updated : Mar 21, 2024, 7:14 PM IST

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ ಹೇಳಿಕೆ

ಬೆಂಗಳೂರು :ಐಎನ್​ಡಿಐಎ ಒಕ್ಕೂಟ ಗೆದ್ದು ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದಾರೆ. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಟಾಲಿನ್ ಹೇಳಿಕೆ ಬಗ್ಗೆ ಕಾಂಗ್ರೆಸ್ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ದೌರ್ಬಲ್ಯವನ್ನು ಮನಗಂಡ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರಕಾರವು ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಐಎನ್​ಡಿಐಎ ಒಕ್ಕೂಟ ಗೆದ್ದು ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಸ್ಟಾಲಿನ್ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಆಗಸ್ಟ್ 5ರಿಂದ ಕರ್ನಾಟಕ ಸರಕಾರದ ವೈಫಲ್ಯಗಳನ್ನು ಮನಗಂಡು ಈ ರೀತಿ ಚುನಾವಣಾ ಪ್ರಣಾಳಿಕೆ ಹೊರಡಿಸಿದೆ. ಇದು ರಾಜ್ಯ ಸರಕಾರಕ್ಕೆ ಗೊತ್ತಿದೆಯೇ ಇಲ್ಲವೋ ಎಂದು ಅಶ್ವಥನಾರಾಯಣ ಟೀಕಿಸಿದರು.

ಕಾವೇರಿ ಐತೀರ್ಪು ಬಂದ ಬಳಿಕ ಬೆಂಗಳೂರಿನ ಕುಡಿಯುವ ನೀರು ಸಂಬಂಧ ಮತ್ತು 400 ಮೆ.ವಾ ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ ಎಂದು ಗೊತ್ತಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದ ಮೇರೆಗೆ ನಮ್ಮ ಸರಕಾರ ಇದ್ದಾಗ ಒಂದು ಸಾಧ್ಯತಾ ವರದಿ (ಫಿಸಿಬಿಲಿಟಿ ರಿಪೋರ್ಟ್) ಸಲ್ಲಿಸಲು ಸೂಚಿಸಲಾಗಿತ್ತು. 2018ರ ಆಗಸ್ಟ್​ 4 ರಂದು ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲ ಆಯೋಗಕ್ಕೆ ತಿಳಿಸಿದ ಬಳಿಕ ಸಾಧ್ಯತಾ ವರದಿ ನೀಡಿದ್ದರು. 2019ರಲ್ಲಿ ಮತ್ತೊಮ್ಮೆ 9 ಸಾವಿರ ಕೋಟಿ ವೆಚ್ಚದ ಪೂರ್ಣ ಪ್ರಮಾಣದ ಸವಿವರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಬಿಜೆಪಿ ಸರಕಾರ ಇದ್ದಾಗ ಮೇಕೆದಾಟು ಯೋಜನೆ ಕುರಿತ ಬೆಳವಣಿಗೆ ಇದು.

ಬಳಿಕ 1 ಸಾವಿರ ಕೋಟಿ ಹಣವನ್ನೂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಡಿ.ಕೆ ಶಿವಕುಮಾರ್ ಅವರು ಮೇಕೆದಾಟು ಸಂಬಂಧ ‘ನನ್ನ ನೀರು ನನ್ನ ಹಕ್ಕು’ ಎಂಬ ಪಾದಯಾತ್ರೆ ನಡೆಸಿದ್ದರು. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮತ್ತು ಡಿಕೆಶಿ ನಿನ್ನೆಯ ಸ್ಟಾಲಿನ್ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ನಿಲುವೇನು ಅನ್ನೋದರ ಬಗ್ಗೆ ತಿಳಿಸಿಲ್ಲ. ಕರ್ನಾಟಕದ ರೈತರ, ಕುಡಿಯುವ ನೀರಿನ ಪ್ರಶ್ನೆ ಇದು. ಹೀಗಾಗಿ ಮುಖ್ಯಮಂತ್ರಿಗಳ ನಿಲುವೇನು ಎಂದು ಅಶ್ವಥನಾರಾಯಣ ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರವು ತಮಿಳುನಾಡು ಸರಕಾರ, ಸ್ಟಾಲಿನ್ ಹೇಳಿಕೆ ಕುರಿತು ತುಟಿ ಬಿಚ್ಚುತ್ತಿಲ್ಲ. ಸಿಎಂ, ಡಿಸಿಎಂ ನಿಲುವೇನು? ಅಥವಾ ನೀವೇನಾದರೂ ಈ ಪ್ರಣಾಳಿಕೆ ಬರೆದುಕೊಟ್ಟಿದ್ದೀರಾ? ಎಂದು ವ್ಯಂಗ್ಯವಾಗಿ ಪ್ರಶ್ನೆಯನ್ನು ಮುಂದಿಟ್ಟರು. ರೈತರು ಮತ್ತು ಕರ್ನಾಟಕಕ್ಕೆ ದ್ರೋಹಿಗಳಾಗಿ ಸಿದ್ದರಾಮಯ್ಯನವರ ಮತ್ತು ಡಿಕೆಶಿ ನಡವಳಿಕೆಯನ್ನು ಗಮನಿಸಿದಾಗ ಇದು ಸ್ಟಾಲಿನ್ ಅವರಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು ಅವರ ಬಾಯಿಗೆ ಇಟ್ಟಂತೆ ಆಗಿದೆ. ಕರ್ನಾಟಕಕ್ಕೆ ಮಾಡಿದ ದ್ರೋಹ ಇದು ಅಶ್ವತ್ಥನಾರಾಯಣ ಎಂದು ಕಿಡಿಕಾರಿದರು.

ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ :ಯಾವುದೇ ಒಂದು ರಾಜ್ಯ ಸರಕಾರಕ್ಕೆ 4 ವರ್ಷಗಳ ಆಡಳಿತದ ಬಳಿಕ ಆಡಳಿತ ವಿರೋಧಿ ಅಲೆ ಸಹಜವಾಗಿ ಆರಂಭವಾಗುತ್ತದೆ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಕೇವಲ 100 ದಿನಗಳು ತುಂಬುವ ಮೊದಲೇ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿತ್ತು. ಅಭಿವೃದ್ಧಿಗೆ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದೆ. ಬರಗಾಲ ಸಂಬಂಧಿ ಕಾಮಗಾರಿಗಳು ನಡೆಯುತ್ತಿಲ್ಲ. ಎಲ್ಲ ಅಭಿವೃದ್ಧಿ ಚಟುವಟಿಕೆಗಳೂ ಸ್ಥಗಿತವಾಗಿವೆ ಎಂದು ಕಾಂಗ್ರೆಸ್ಸಿನ ಬಸವರಾಜ ರಾಯರೆಡ್ಡಿ ಮತ್ತಿತರರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು ಎಂದು ಅಶ್ವಥನಾರಾಯಣ ವಿವರಿಸಿದರು.

ಬರಗಾಲದ ಕ್ರಿಯಾಯೋಜನೆ ರೂಪಿಸದೆ 10.50 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣದಲ್ಲಿ ಬರಗಾಲದ ಕಾಮಗಾರಿ ಪ್ರಾರಂಭಿಸಬೇಕೇ? ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕೇ? ಜಾನುವಾರುಗಳಿಗೆ ಮೇವಿನ ಕಿಟ್ ಕೊಡಬೇಕೇ? ಎಂಬ ಕ್ರಿಯಾಯೋಜನೆ ಮಾಡಿರಲಿಲ್ಲ ಎಂದು ಅಶ್ವಥನಾರಾಯಣ ಆಕ್ಷೇಪಿಸಿದರು.

ಸಿದ್ದರಾಮಯ್ಯ ಕೇಂದ್ರಕ್ಕೆ 17 ಸಾವಿರ ಕೋಟಿ ರೂ.ಗಳಿಗಾಗಿ ಕೋರಿಕೆ ಸಲ್ಲಿಸಿದ್ದಾಗಿ ಹೇಳುತ್ತ ಕಾಲಹರಣ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‍ಡಿಆರ್‍ಎಫ್) ಹಣ ಬಿಡುಗಡೆಗೆ ಕಾಯುತ್ತ ಕುಳಿತರೇ ಹೊರತು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‍ಡಿಆರ್​ಎಫ್) ಹಣ ಬಿಡುಗಡೆ ಮಾಡಲೇ ಇಲ್ಲ ಎಂದು ಅಶ್ವಥನಾರಾಯಣ ಟೀಕಿಸಿದರು.

ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ಪ್ರಮಾಣದಲ್ಲಿ ನೆರೆ ಹಾವಳಿ ಆಗಿತ್ತು. ಅವರು ಕ್ಯಾಬಿನೆಟ್ ಕೂಡ ರಚಿಸಿರಲಿಲ್ಲ. ಒಬ್ಬರೇ ಇದ್ದರೂ ಹಾನಿಯನ್ನು ವೀಕ್ಷಿಸಿ ಮನೆ ಹಾನಿ ಆದವರಿಗೆ ಹಣವನ್ನು ಬಿಡುಗಡೆ ಮಾಡಿದ್ದರು ಎಂದು ಅಶ್ವಥನಾರಾಯಣ ನೆನಪಿಸಿದರು.

ನೆರೆ ಹಾವಳಿ ಮಾತ್ರವಲ್ಲದೆ ಕೋವಿಡ್ ಸಂಕಷ್ಟವನ್ನೂ ಯಡಿಯೂರಪ್ಪನವರು ಎದುರಿಸಿದ್ದರು. ಸಿದ್ದರಾಮಯ್ಯ ಕೇಂದ್ರದತ್ತ ಬೆರಳು ತೋರುತ್ತಾರೆಯೇ ಹೊರತು ಎಸ್‍ಡಿಆರ್​ಎಫ್ ಹಣ ಬಿಡುಗಡೆ ಮಾಡುವ ಬದ್ಧತೆಯನ್ನು ತೋರಿಸುತ್ತಿಲ್ಲ. ಇದು ರಾಜ್ಯ ಸರಕಾರದ ಜನ ವಿರೋಧಿ ನೀತಿಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಂಡಿತು. ಮುಂಗಾರು ಮಳೆ ವಿಳಂಬ, ಸಮರ್ಪಕ ಮಳೆ ಆಗದ ಕಾರಣ ಅಣೆಕಟ್ಟುಗಳಲ್ಲಿ ನೀರು ಇಲ್ಲದೆ ಇರುವುದನ್ನು ತಿಳಿಸಿ ಮನದಟ್ಟು ಮಾಡಬೇಕಿದ್ದ ರಾಜ್ಯ ಸರಕಾರವು ಕೋರ್ಟ್​ ಗೆ ಅರ್ಜಿಯನ್ನೂ ಸಲ್ಲಿಸಲಿಲ್ಲ. ಬದಲಾಗಿ ನಿರಂತರವಾಗಿ ನೀರು ಹರಿಯಬಿಟ್ಟರು. ಮಾರ್ಚ್, ಏಪ್ರಿಲ್‍ನಲ್ಲಿ 5 ಟಿಎಂಸಿ ನೀರು ಬಿಡುಗಡೆಗೆ ಆದೇಶ ಮಾಡಿದರೂ ಸಹ ಇದುವರೆಗೆ ರಾಜ್ಯ ಸರಕಾರ ಈ ಆದೇಶಕ್ಕೆ ವಿರುದ್ಧವಾಗಿ ಅರ್ಜಿ ಹಾಕಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ :ತಮಿಳುನಾಡು ಏನಾದರೂ ಮಾಡಲಿ, ನಾನು ಮೇಕೆದಾಟು ಕಟ್ಟಲೆಂದೇ ನೀರಾವರಿ ಸಚಿವನಾಗಿದ್ದೇನೆ: ಡಿಕೆಶಿ - LET TAMIL NADU DO ANYTHING

Last Updated : Mar 21, 2024, 7:14 PM IST

ABOUT THE AUTHOR

...view details