ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ; ಅರವಿಂದ ಬೆಲ್ಲದ್, ಅಮೃತ ದೇಸಾಯಿ ಪೊಲೀಸರ ವಶಕ್ಕೆ

ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಸಿಎಂ ಸಿದ್ದರಾಮಯ್ಯರಿಗೆ ಘೇರಾವ್ ಹಾಕಲು ಬಿಜೆಪಿ ಪ್ಲಾನ್ ಮಾಡಿಕೊಂಡಿತ್ತು. ಹೀಗಾಗಿ 30 ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

By ETV Bharat Karnataka Team

Published : 4 hours ago

Updated : 2 hours ago

arvind-bellad-amrita-desai-detained
ಅರವಿಂದ ಬೆಲ್ಲದ್, ಅಮೃತ ದೇಸಾಯಿ (ETV Bharat)

ಧಾರವಾಡ : ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣದ ಕೇಸ್ ವಾಪಸ್ ಹಿಂಪಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಅಮೃತ ದೇಸಾಯಿ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಧಾರವಾಡದ ಶಿವಾಜಿ ಸರ್ಕಲ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪುಪಟ್ಟಿ ತೋರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಸಿಎಂ ಸವದತ್ತಿಯ ಯಲ್ಲಮ್ಮನ ಗುಡ್ಡದ ಕಾರ್ಯಕ್ರಮ ಮುಗಿಸಿ ಸಂಜೆ ರೆಡ್ಡಿ ಸಹಕಾರಿ ಬ್ಯಾಂಕ್​ ಶತಮಾನೋತ್ಸವಕ್ಕೆ ಜಿಲ್ಲೆಗೆ ಬರಲಿದ್ದಾರೆ. ಈ ವೇಳೆ ಅವರಿಗೆ ಕಪ್ಪುಪಟ್ಟಿ ತೋರಿಸಿ ಅಸಮಾಧಾನ ವ್ಯಕ್ತಪಡಿಸುವ ಇರಾದೆಯಲ್ಲಿದ್ದರು. ಸವದತ್ತಿಯಿಂದ ಸಿಎಂ ಬರುವ ಮುಂಚೆಯೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ (ETV Bharat)

ಸಿದ್ದರಾಮಯ್ಯ ಗೋ ಬ್ಯಾಕ್ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸಿಎಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿಗರು ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಇದನ್ನು ಕಂಡ ಡಿಸಿಪಿ ಮಹಾನಿಂಗ ನಂದಗಾವಿ ಅವರು ಕಪ್ಪು ಬಟ್ಟೆ ವಶಕ್ಕೆ ಪಡೆದಿದ್ದಾರೆ.

ಧಾರವಾಡದ ರೆಡ್ಡಿ ಬ್ಯಾಂಕ್ ಶತಮಾನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಬರಲಿದ್ದು, ಸಿಎಂ ಬರುವ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಎರಡು ಬಸ್​ಗಳಲ್ಲಿ ಬಿಜೆಪಿಯ 30ಕ್ಕೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬೇರೆಡೆಗೆ ಕರೆದೊಯ್ದರು.

ಸಮಾಜದ ವಿದ್ರೋಹಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿ : ಸಂವಿಧಾನದ ಸಂರಕ್ಷಕರು ಎಂದು ಕರೆಸಿಕೊಳ್ಳುವ ಕಾಂಗ್ರೆಸ್​ನವರು ಇಂದು ಘನಘೋರ ಅಪರಾಧ ಮಾಡಿ, ಸಮಾಜದ ವಿದ್ರೋಹಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿದರು (ETV Bharat)

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದ ವಿಚಾರವಾಗಿ ಮಾತನಾಡಿ, ಹಳೇಹುಬ್ಬಳ್ಳಿ ಗಲಾಟೆ ಪೊಲೀಸರ ವಿರುದ್ಧ ನಡೆದಿರೋದು, ಪೊಲೀಸ್ ಠಾಣೆಯನ್ನು ಸುಡಲು ಯತ್ನ ನಡೆಸಿರುವ ಪ್ರಕರಣವಾಗಿದೆ. ಇದೀಗ ಅಂತವರ ಕೇಸ್​ನ್ನು ವಾಪಸ್ ತೆಗೆದುಕೊಳ್ಳಲು ಮುಂದಾಗಿದೆ. ಇದು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ ಹಾಗೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದಿಂದ ತುಷ್ಟೀಕರಣದ ರಾಜಕಾರಣ : ರಾಜ್ಯ ಸರ್ಕಾರ ಹುಬ್ಬಳ್ಳಿಯ ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿಂದು ಮಾತನಾಡಿದ ಅವರು, ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ. ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ ಶೀಟ್ ಆಗಿದೆ. ಯುಎಪಿಐ ಅಡಿ ಎನ್‌ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಈಗ ಇವರು ಸಮಾಜವನ್ನು ಸಂತುಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಎನ್‌ಐಎಗೆ ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಆದರೂ, ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಹುಬ್ಬಳ್ಳಿ ‌ಗಲಭೆ ಕೇಸ್​ ವಾಪಸ್​ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ

Last Updated : 2 hours ago

ABOUT THE AUTHOR

...view details