ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ ಎನ್. ವೆಂಕಟೇಶಪ್ಪ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು 48 ಗಂಟೆಗಳಲ್ಲೇ ಬಂಧಿಸಿದ್ದಾರೆ. ಧನರಾಜ್ ಹಾಗೂ ಸತೀಶ್ ಬಂಧಿತ ಆರೋಪಿಗಳು.
ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದ ಗೇಟು ಬಳಿ ಜ.3ರ ರಾತ್ರಿ 9:15 ಗಂಟೆಗೆ ಜೆಡಿಎಸ್ ಮುಖಂಡ ಎನ್. ವೆಂಕಟೇಶಪ್ಪ(54) ತಮ್ಮ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಮುಖ, ಹೊಟ್ಟೆ ಮತ್ತು ಭುಜದ ಭಾಗಕ್ಕೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 02/2025 ಕಲಂ 103(1) ಬಿ.ಎನ್.ಎಸ್-2023 ಅಡಿ ದೂರು ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸಿಮ್ ಮತ್ತು ಪೊಲೀಸ್ ಉಪಾಧೀಕ್ಷಕ ಎಸ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ, ಆರೋಪಿಗಳಾದ ಧನರಾಜ್ ಮತ್ತು ಸತೀಶ್ ಅವರನ್ನು ಕೇವಲ 48 ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದೆ.