ದೇವನಹಳ್ಳಿ: ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆ ಮಾಡಿದ ಬಿಟಿಕ್ ವಿದ್ಯಾರ್ಥಿ, ಮನೆಗೆ ಹೋದರೆ ಹೆತ್ತವರು ಬೈಯುತ್ತಾರೆ ಎಂದು ಏರ್ಪೋರ್ಟ್ನಲ್ಲಿ ತಾನೊಬ್ಬ ಟೆರರಿಸ್ಟ್ ಎಂದೇಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಠಿ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ನೋ ಮೂಲದ ವಿದ್ಯಾರ್ಥಿ 'ತಾನು ಉಗ್ರ' ಎಂದು ಹೇಳಿದವ.
ಫೆಬ್ರವರಿ 17 ರ ರಾತ್ರಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಏರ್ ಇಂಡಿಯಾದ ನಂ.151731 ವಿಮಾನದಲ್ಲಿ ಬೆಂಗಳೂರಿನಿಂದ ಲಕ್ನೋಗೆ ಪ್ರಯಾಣಿಸಬೇಕಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ, ವಿಮಾನ ಟೆಕ್ ಆಫ್ ಆಗುವ ಮುನ್ನವೇ ಮನಸ್ಸು ಬದಲಾಯಿಸಿ ಆತ ವಿಮಾನದಿಂದ ಹೊರಗೆ ಬಂದಿದ್ದ. ಈ ಬಗ್ಗೆ ಸಿಐಎಸ್ಎಫ್ ಅಧಿಕಾರಿಗಳಿಗೆ ಏರ್ಲೈನ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಬಳಿಕ CISF ಸಿಬ್ಬಂದಿ ಯುವಕನನ್ನ ಪ್ರಶ್ನೆ ಮಾಡಿದಾಗ, ತಾನು ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ. ಇದರಿಂದ ಏರ್ಪೋರ್ಟ್ನಲ್ಲಿ ಆತಂಕ ಉಂಟಾಗಿತ್ತು.
ವಿದ್ಯಾರ್ಥಿ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿ ಬಂಧಿಸಲಾಗಿತ್ತು. ಅನಂತ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಬಂಧಿತ ವಿದ್ಯಾರ್ಥಿ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ. ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆ ಮಾಡಿದ್ದ, ಈ ಕಾರಣಕ್ಕೆ ಆತನ ಪೋಷಕರು ಮನೆಗೆ ಬರುವಂತೆ ಹೇಳಿದ್ದರು. ಮನೆಗೆ ಹೋದರೆ ಹೆತ್ತವರು ಬೈಯುತ್ತಾರೆ ಎಂದು ಆತ ಹೆದರಿದ್ದ. ಜೊತೆಗೆ ಮನೆಗೆ ಹೋಗಲು ಇಷ್ಟ ಪಡದೆ ತಾನೊಬ್ಬ ಭಯೋತ್ಪಾದಕ ಎಂದು ನಾಟಕವಾಡಿದ್ದಾನೆಂದು CISF ಅಧಿಕಾರಿಗಳು ತಿಳಿಸಿದ್ದಾರೆ.