ಬೆಂಗಳೂರು: 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ 48 ವರ್ಷದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (ಪೋಕ್ಸೋ) ಮತ್ತು ಐಪಿಸಿ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆ ರದ್ದು ಕೋರಿ ತುಮಕೂರು ಜಿಲ್ಲೆಯ ಕೃಷ್ಣಪ್ಪ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಜೊತೆಗೆ, ಮುಂದಿನ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
ಅರ್ಜಿದಾರರು ಪ್ರಬುದ್ಧತೆ ಮೀರಿ ಕಾಮ ಪ್ರಚೋದನೆಯಲ್ಲಿ ಭಾಗಿಯಾಗಲು ಪ್ರಯತ್ನಿಸಿದ್ದಾರೆ. ಆ ಮೂಲಕ ಲೈಂಗಿಕ ವಿಕೃತಿಯಲ್ಲಿ ತೊಡಗಿದ್ದಾರೆ. ಈ ಪ್ರಕರಣದ ವಿಚಾರಣೆ ರದ್ದುಗೊಳಿಸಿದರೆ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಮಾನಸಿಕ ಅಸ್ವಸ್ಥ ಮಗುವಿನ ಪಾಟಿ-ಸವಾಲಿನಲ್ಲಿ ತಪ್ಪಾದ ಉತ್ತರಗಳನ್ನು ನೀಡಿದ್ದಾರೆ ಎಂಬ ಆಧಾರದ ಮೇಲೆ ಅರ್ಜಿದಾರರು ವಿಚಾರಣೆಯನ್ನು ರದ್ದುಗೊಳಿಸಲು ಹೇಗೆ ಕೋರುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: 2023ರ ಡಿಸೆಂಬರ್ 10 ರಂದು ಸಂತ್ರಸ್ತೆಯ ತಾಯಿ ಮಧ್ಯಾಹ್ನ 3.15ಕ್ಕೆ ತನ್ನ ಮನೆ ಕೆಲಸವನ್ನು ಮಾಡುತ್ತಿದ್ದರು. ಅವರ ಮಗಳು(ಸಂತ್ರಸ್ತೆ) ಮನೆಯ ಮುಂದೆ ಒಬ್ಬಂಟಿಯಾಗಿ ಆಟವಾಡುತ್ತಿದ್ದಳು. ಸುಮಾರು 30 ನಿಮಿಷಗಳ ನಂತರ, ಅದೇ ಸ್ಥಳದಲ್ಲಿ ಆಟವಾಡುತ್ತಿದ್ದ ಮಗಳು ಕಾಣೆಯಾಗಿದ್ದಳು. ತಾಯಿ ಹುಡುಕಲು ಹೋದಾಗ ಆರೋಪಿಯ ಮನೆಯಿಂದ ಮಗಳು ಹೊರಬರುತ್ತಿದ್ದಳು. 'ಕಬ್ಬು ನೀಡುವ ನೆಪದಲ್ಲಿ ತನ್ನ ಮನೆಯ ಸ್ನಾನಗೃಹಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ' ಎಂದು ಪುತ್ರಿ ತನ್ನ ತಾಯಿಗೆ ತಿಳಿಸಿದ್ದರು.
ಘಟನೆಯಿಂದ ಕುಟುಂಬ ಮತ್ತು ಮಗಳ ಪ್ರತಿಷ್ಠೆಗೆ ಹಾನಿಯಾಗಬಹುದು ಎಂಬ ಭಯದಿಂದ ತಕ್ಷಣ ದೂರು ನೀಡಲಿಲ್ಲ. ಆದರೆ, ಮಗಳು ನೋವನ್ನು ಅನುಭವಿಸುತ್ತಿದ್ದೇನೆ ಎಂದು ಪದೇ ಪದೇ ಹೇಳಿದ್ದರಿಂದ ಅವರ ತಾಯಿ, 2023ರ ಡಿಸೆಂಬರ್ 21 ರಂದು ಅಂದರೆ 11 ದಿನಗಳ ಬಳಿಕ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಈ ಘಟನೆ 48 ವರ್ಷ ವಯಸ್ಸಿನ ಅರ್ಜಿದಾರರನ್ನು ಕ್ಷಮಿಸಲಾಗದ ಕೃತ್ಯವಾಗಿದ್ದು, ಅರ್ಜಿ ತಿರಸ್ಕರಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದ್ದರು. ಸರ್ಕಾರಿ ವಕೀಲರ ವಾದ ಮತ್ತು ದೂರುದಾರರ ಆರೋಪವನ್ನು ಅರ್ಜಿದಾರರ ಪರ ವಕೀಲರು ತಿರಸ್ಕರಿಸಿದ್ದರು.
ಇದನ್ನೂ ಓದಿ: ಲಿಂಗ ಪರಿವರ್ತನೆಗೊಳಗಾದವರಿಗೆ ಪರಿಷ್ಕೃತ ಜನನ ಪ್ರಮಾಣ ಪತ್ರ: ಕಾನೂನು ತಿದ್ದುಪಡಿಗೆ ಹೈಕೋರ್ಟ್ ಸೂಚನೆ
ಇದನ್ನೂ ಓದಿ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನು ಮಾರಿ 12 ವರ್ಷದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಅರ್ಜಿ ವಜಾ