ರೈತ ಬಸವಂತಪ್ಪ ನಾಯಿಕ್ ಮಾತನಾಡಿದರು (ETV Bharat) ಬೆಳಗಾವಿ : ಗ್ರಾಮೀಣ ಭಾಗದ ಜನರಿಗೆ ನೀರಿನ ಮೂಲಗಳು ಎಂದರೆ ಕೆರೆಗಳು. ಭೀಕರ ಬರಗಾಲದಿಂದ ಆ ಕೆರೆಗಳು ನೀರಿಲ್ಲದೇ ಖಾಲಿ ಹೊಡೆಯುತ್ತಿದ್ದು, ಕೆರೆಗಳಲ್ಲಿ ಭೂಮಿ ಬಿರುಕು ಬಿಟ್ಟಿದೆ. ಕೆರೆಗಳಲ್ಲಿ ನೀರಿದ್ದಿದ್ದರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ರೈತ, ಈಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಬೆಳೆಗಳು ಒಣಗಿ ಹೋಗ್ತಿದ್ದು, ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಸಪ್ತನದಿಗಳು ಹರಿಯುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು, ನದಿಗಳು ಬತ್ತಿ ಹೋಗುವ ಸ್ಥಿತಿ ತಲುಪಿವೆ. ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 290 ಕೆರೆಗಳಿದ್ದು, ಆ ಪೈಕಿ 200 ಕೆರೆಗಳು ನೀರಿಲ್ಲದೇ ಖಾಲಿ ಹೊಡೆಯುತ್ತಿವೆ. ಬಿಸಿಲಿನ ಝಳಕ್ಕೆ ಕೆರೆಗಳಲ್ಲಿನ ನೆಲ ಬಿರುಕು ಬಿಟ್ಟಿದೆ.
ಕೆರೆಗಳನ್ನೇ ನಂಬಿಕೊಂಡು ಬೋರ್ವೆಲ್ ಕೊರೆಸಿದ್ದ ರೈತರ ಕೊಳವೆಬಾವಿಗಳಲ್ಲೂ ನೀರು ಬರುತ್ತಿಲ್ಲ. ಹೀಗಾಗಿ ಬಿತ್ತನೆ ಮಾಡಿದ ಕಬ್ಬು ಹಾಗೂ ಇನ್ನಿತರ ಬೆಳೆಗಳಿಗೆ ನೀರಿಲ್ಲದೆ ಅನ್ನದಾತ ಪರದಾಡುವ ಸ್ಥಿತಿಗೆ ತಲುಪಿದ್ದಾನೆ. 290 ಕೆರೆಗಳ ಪೈಕಿ 90 ಕೆರೆಗಳಲ್ಲಿ ಮಾತ್ರ ನೀರಿದ್ದು, ಸೂಕ್ತ ಸಮಯಕ್ಕೆ ಮಳೆಯಾಗದಿದ್ದರೆ ಆ ನೀರೂ ಸಹ ಖಾಲಿಯಾಗುವ ಆತಂಕ ಅನ್ನದಾತರಲ್ಲಿ ಮನೆ ಮಾಡಿದೆ. ಅಂತೆಯೇ ಬಡಾಲ ಅಂಕಲಗಿಯಲ್ಲಿರುವ 10 ಎಕರೆ ಪ್ರದೇಶದ ಬೃಹತ್ ಕೆರೆ ಬತ್ತಿ ಹೋಗಿದೆ.
ಬಡಾಲ ಅಂಕಲಗಿ ಗ್ರಾಮದ ರೈತ ಬಸವಂತಪ್ಪ ನಾಯಿಕ್ ಮಾಧ್ಯಮಗಳ ಜೊತೆಗೆ ಮಾತನಾಡಿ, ''2002ರಲ್ಲಿ ಕೆರೆ ಬತ್ತಿತ್ತು. ಈಗ ಮತ್ತೆ ಬತ್ತಿದೆ. ಇದರಿಂದ ಸುತ್ತಲಿನ ಎಲ್ಲಾ ಬೋರ್ವೆಲ್ಗಳಲ್ಲಿ ನೀರು ಬರುತ್ತಿಲ್ಲ. ಊರಲ್ಲಿರುವ 6 ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ'' ಎಂದರು.
ಜಿಲ್ಲೆಯ 72 ಕೆರೆಗಳಲ್ಲಿ ಶೇ. 30ರಷ್ಟು ಮಾತ್ರ ನೀರಿದೆ. 15 ಕೆರೆಗಳಲ್ಲಿ ಶೇ. 50 ರಷ್ಟು ಹಾಗೂ ಮೂರು ಕೆರೆಗಳಲ್ಲಿ ಮಾತ್ರ ಶೇ.99ರಷ್ಟು ನೀರಿನ ಸಂಗ್ರಹವಿದೆ. ಸರ್ಕಾರ ಕೆರೆ ತುಂಬಿಸುವ ಯೋಜನೆಯನ್ನು ರೂಪಿಸಿದರೂ ಸಹ ಆ ಯೋಜನೆ ಇನ್ನೂ ಅನುಷ್ಠಾನಕ್ಕೆ ಬಾರದ ಕಾರಣ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೆರೆಗಳು ಬತ್ತಿ ಹೋಗಿರುವ ಕಾರಣ ಅಂತರ್ಜಲ ಮಟ್ಟವೂ ಕುಸಿತಗೊಂಡಿದ್ದು, ಬೋರ್ವೆಲ್ಗಳೂ ಸಹ ಸಂಪೂರ್ಣ ಕಾರ್ಯವನ್ನು ನಿಲ್ಲಿಸಿವೆ.
ಜಿಲ್ಲೆಯಲ್ಲಿ 30,813 ಹೆಕ್ಟೇರ್ ಕೃಷಿ ಪ್ರದೇಶವೂ ಕೆರೆ ನೀರಿನ ಮೇಲೆಯೇ ಅವಲಂಬಿತವಾಗಿದೆ. ಕೆರೆಗಳು ಬತ್ತಿ ಹೋಗಿರುವ ಕಾರಣ ಸದ್ಯ ಬಿತ್ತನೆ ಮಾಡಿ ಕೈಗೆ ಬಂದಿರುವ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರೈತಾಪಿ ವರ್ಗವಿದೆ. ಬೆಳಗಾವಿ ಜಿಲ್ಲೆಯ 15 ತಾಲೂಕುಗಳ 145 ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಸಹ ಸಮಸ್ಯೆ ಆಗುತ್ತಿದೆ.
ಈಗಾಗಲೇ ಜಿಲ್ಲೆಯ 6 ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಮೇವು ಬ್ಯಾಂಕ್ ಮೂಲಕ ರೈತರ ಜಾನುವಾರುಗಳಿಗೆ ಮೇವು ನೀಡಲಾಗುತ್ತಿದೆ. ಇನ್ನು ಕೆರೆಗಳನ್ನು ತುಂಬಿಸುವ ವಿಚಾರಕ್ಕೆ ಈಗಾಗಲೇ ನೀರಾವರಿ ಇಲಾಖೆಯಿಂದ ಮಂಜೂರಾಗಿದ್ದು, ಆ ಕೆಲಸ ನಡೆಯುತ್ತಿದೆ. -ನಿತೇಶ್ ಪಾಟೀಲ್, ಬೆಳಗಾವಿ ಜಿಲ್ಲಾಧಿಕಾರಿ.
ಸದ್ಯ ಜಲಾಶಯಗಳಲ್ಲಿರುವ ನೀರೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದಕ್ಕಿಂತಲೂ ಕಡಿಮೆಯಾದ ಪರಿಣಾಮ ರೈತರು ಮಳೆಗಾಗಿ ಆಕಾಶದ ಕಡೆ ಮುಖ ಮಾಡಿ ಕುಳಿತಿದ್ದಾರೆ. ಮಳೆರಾಯ ಕೃಪೆ ತೋರಿದರೆ ಮಾತ್ರ ಇದಕ್ಕೆಲ್ಲಾ ಪರಿಹಾರ ಸಿಗಲಿದೆ. ಅಲ್ಲದೇ, ಸರ್ಕಾರ ಶೀಘ್ರವೇ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಇದನ್ನೂ ಓದಿ :ಬೆಂಗಳೂರಿನ ಕೆರೆಗಳಿಗೆ ಸಂಸ್ಕರಿಸಿದ ನೀರು: ಅಂತರ್ಜಲ ಮಟ್ಟ ಹೆಚ್ಚಿಸಲು BWSSB ಯೋಜನೆ