ಉಡುಪಿ :ಮಳೆಗಾಲ ಬಂತೆಂದರೆ ಸಾಮಾನ್ಯ ನೀರಿನ ಹರಿವಿಗೂ ಕೂಡ ಮೈದುಂಬಿ ಹರಿಯುವ ಜಲಪಾತಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಮಣಿಪಾಲದಲ್ಲಿ ಇಂತಹ ಸಣ್ಣಪುಟ್ಟ ಕಿರು ಜಲಪಾತಗಳು ಸಾಕಷ್ಟಿವೆ. ಯಾವುದೇ ಅಪಾಯವಿಲ್ಲದೆ ಭೂಮಿಯ ಮೇಲೆ ಹರಿಯುವ ಈ ಜಲಪಾತಗಳಲ್ಲಿ ಮೋಜು ಮಸ್ತಿ ಮಾಡುವುದೇ ಒಂದು ಅದ್ಭುತ ಅನುಭವ.
ಮಳೆ ಬಂದಾಗ ಮಾತ್ರ ಮೂಡಿಕೊಳ್ಳುತ್ತದೆ ಈ ಜಲಪಾತ : ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಈ ಜಲಪಾತ ನೋಡಲು ಭೇಟಿ ಕೊಡುತ್ತಿದ್ದಾರೆ.
ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿರುವ ಅರ್ಬಿ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು. ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವ. ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಇಲ್ಲಿಗೆ ಬರುತ್ತಿದೆ.
ಮಣಿಪಾಲದ ಮಹಾನಗರದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ : ಸತತ ಮಳೆಯ ಹಿನ್ನೆಲೆಯಲ್ಲಿ ಜಲಪಾತ ಮೈದುಂಬಿ ಹರಿಯುತ್ತಿದೆ. ಸಣ್ಣ ತೊರೆಗಳಿಂದ ಸೃಷ್ಠಿಯಾಗಿರುವ ಈ ಜಲಪಾತವು ಅಪಾಯಕಾರಿಯಲ್ಲದಿದ್ದರೂ ಜಾರುವ ಕಲ್ಲುಗಳ ಮೇಲೆ ನಡೆದಾಡುವಾಗ ಜಾಗ್ರತೆ ವಹಿಸುವುದು ಒಳಿತು.