ಕರ್ನಾಟಕ

karnataka

ETV Bharat / state

ಭವಾನಿ ರೇವಣ್ಣಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ - RELIEF FOR BHAVANI REVANNA - RELIEF FOR BHAVANI REVANNA

ಹಾಸನ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರ ಲೈಂಗಿಕ ಹಗರಣ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ್ದ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಭವಾನಿ ರೇವಣ್ಣ
ಭವಾನಿ ರೇವಣ್ಣ (ETV Bharat)

By ETV Bharat Karnataka Team

Published : Jun 18, 2024, 11:28 AM IST

Updated : Jun 18, 2024, 1:37 PM IST

ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್, ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಸಂತ್ರಸ್ಥೆ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪೊಲೀಸರು ವಿಚಾರಣೆಗೆ ಕರೆದಾಗ ಹೋಗಬೇಕು. ಅಗತ್ಯವೆನಿಸಿದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಗೆ ವಿಚಾರಣೆಗೆ ಕರೆದಾಗ ಪೊಲೀಸರೊಂದಿಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆದೇಶದ ಪ್ರತಿಯನ್ನೂ ಪ್ರಕಟ ಮಾಡಲಾಗಿದೆ.

ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಕೋರಿದಾಗ ನ್ಯಾಯಾಲಯ ಅದಕ್ಕೆ ಕಾರಣ ಕೇಳುವಂತಿಲ್ಲ.‌ ಜತೆಗೆ ಯಾವ ಕಾರಣಕ್ಕೆ ವಶಕ್ಕೆ ಪಡೆಯಬೇಕು ಎಂಬುದರ ಕುರಿತು ಪ್ರಶ್ನಿಸುವಂತಿಲ್ಲ ಎಂಬ ಸರ್ಕಾರಿ ವಕೀಲರ ವಾದ ಸುಪ್ರೀಂಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೇ, ಎಸ್‌ಐಟಿ ನಡೆಸುತ್ತಿರುವ ವಿಚಾರಣೆಗೆ ಅರ್ಜಿದಾರರು ಸಹಕರಿಸುತ್ತಿಲ್ಲ ಎಂಬುದಾಗಿ ಸರ್ಕಾರದ ವಾದವಾಗಿದೆ. ಆದರೆ, ಪೊಲೀಸರು ಮೂರುದಿನಗಳ ಅವಧಿಯಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಅರ್ಜಿದಾರರು ಉತ್ತರಿಸಿದ್ದಾರೆ. ಪೊಲೀಸರು ಬಯಸಿದಂತೆ ಆರೋಪಿಗಳು ಉತ್ತರಿಸಬೇಕು ಎಂದು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಅಪಹರಣದ ಬಳಿಕ ಸಂತ್ರಸ್ಥೆಗೆ ಬಟ್ಟೆ ನೀಡಿಲ್ಲ, ತಿನ್ನಲು ಆಹಾರ ಒದಗಿಸಿಲ್ಲ ಎಂಬುದಾಗಿ ಸರ್ಕಾರ ವಾದಿಸಿದೆ, ಆದರೆ, ಸಂತ್ರಸ್ಥೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ನೀಡುವ ಸಂದರ್ಭದಲ್ಲಿ ಭವಾನಿ ಅಕ್ಕ ಊಟ ಮತ್ತು ಬಟ್ಟೆಗಳನ್ನು ಕಳುಹಿಸಿದ್ದರು ಎಂಬುದಾಗಿ ಹೇಳಿಕೆ ನೀಡಿರುವ ಅಂಶ ದಾಖಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗದು ಎಂಬುದಾಗಿ ನ್ಯಾಯಪೀಠ ತಿಳಿಸಿದೆ.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕುಟುಂಬದ ಆಧಾರವಾಗಿದೆ. ಅಂತಹ ಮಹಿಳೆಯನ್ನು ಪೊಲೀಸರು ಬಂಧಿಸಿದಲ್ಲಿ ಇಡೀ ಕುಟುಂಬ ತೊಂದರೆಗೆ ಸಿಲುಕಲಿದೆ. ಮನೆಗಳಲ್ಲಿ ಹಿರಿಯರು, ಮಕ್ಕಳು ಇರಲಿದ್ದು, ಆರೋಪಿತ ಮಹಿಳೆಯನ್ನು ಅವಲಂಬಿಸಿರುತ್ತಾರೆ. ಅಂತಹ ಮಹಿಳೆ ಪೊಲೀಸ್ ವಶಕ್ಕೆ ನೀಡಿದಾಗ ಇಡೀ ಕುಟುಂಬಕ್ಕೆ ತೊಂದರೆಯಾಗಲಿದೆ. ಮಹಿಳೆಯನ್ನು ಬಂಧಿಸಲು ವಾರಂಟ್​ ಜಾರಿ ಮಾಡಿದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ ಎನ್ನಲಾಗದು. ಇದು ಪ್ರಕರಣದ ಸಾರಾಂಶ ಮತ್ತು ಸಂದರ್ಭಕ್ಕೆ ಅನುಗುಣವಾಗಿರಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಾಧ್ಯಮಗಳು ಸಂಯಮ ಪಾಲಿಸಬೇಕು:ದಿನ ಪತ್ರಿಕೆಗಳು ಸೇರಿದಂತೆ ಮಾಧ್ಯಮಗಳನ್ನು ಸಾಮಾನ್ಯ ಜನ ಓದುತ್ತಾರೆ. ಆ ಬಗ್ಗೆ ಹಲವು ಸಂದರ್ಭಗಳಲ್ಲಿ ಚರ್ಚೆ ನಡೆಸುತ್ತಾರೆ. ಆದರೆ, ಅವರು ಪ್ರಕರಣ ಕುರಿತ ದಾಖಲೆಗಳನ್ನು ಪರಿಶೀಲಿಸಿರುವುದಿಲ್ಲ. ಮಾಧ್ಯಮಗಳ ಚರ್ಚೆ ನೋಡಿ ಆರೋಪಿಯನ್ನು ಅಪರಾಧಿ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಾಗಿ ಯಾವುದೇ ಪ್ರಕರಣದಲ್ಲಿ ಮಹಿಳೆ ಆರೋಪಿಯಾಗಿದ್ದಾಗಿ ಆ ಕುರಿತಂತೆ ಮಾಧ್ಯಮಗಳು ಸಂಯಮ ಪಾಲಿಸಬೇಕು. ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಎಂದಿದೆ.

ಅಲ್ಲದೆ, ಅಮೆರಿಕ ಸಂವಿಧಾನದಲ್ಲಿ ತಿದ್ದುಪಡಿ ತಂದಿದ್ದು, ಮಾಧ್ಯಮ ವಿಚಾರಣೆಯನ್ನು ನಿರ್ಬಂಧಿಸಲಾಗಿದೆ. ಮಾಧ್ಯಮಗಳ ವಿಚಾರಣೆ ನಿಬಂಧಿಸಲು ಇದು ಸೂಕ್ತ ಸಮಯವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪ್ರಕರಣದ ಹಿನ್ನೆಲೆ:ಪ್ರಜ್ವಲ್​ ರೇವಣ್ಣ ಲೈಂಗಿಕ ಪ್ರಕರಣದಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್​​ ಠಾಣೆಯಲ್ಲಿ ಭವಾನಿ ರೇವಣ್ಣ ವಿರುದ್ದ ಐಪಿಸಿ ವಿವಿಧ ಸೆಕ್ಷನ್​ಗಳ ಅಡಿ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಭವಾನಿ ಪತಿ, ಜೆಡಿಎಸ್​ ಶಾಸಕ ಹೆಚ್.ಡಿ. ರೇವಣ್ಣ ಮೊದಲ ಆರೋಪಿ ಹಾಗೂ ಸತೀಶ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ, ಎಸ್​ಐಟಿ ನೋಟಿಸ್ ಜಾರಿ ಮಾಡಿದ್ದರೂ ಭವಾನಿ ರೇವಣ್ಣ ಅವರು ಹಾಜರಾಗಿರಲಿಲ್ಲ. ಈ ಸಂಬಂಧ ಬಂಧನದ ಭೀತಿಯೂ ಎದುರಾಗಿತ್ತು. ಈ ಪ್ರಕರಣದಲ್ಲಿ ಭವಾನಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಇಂದು ಅಂತ್ಯ - Sexual assault case

Last Updated : Jun 18, 2024, 1:37 PM IST

ABOUT THE AUTHOR

...view details