ಬಳ್ಳಾರಿ: "ನಮ್ಮ ಮೇಲೆ ಸಂಡೂರು ಕ್ಷೇತ್ರದ ಜನ ವಿಶ್ವಾಸ ಇಟ್ಟಿದ್ದಾರೆ ಎನ್ನುವುದಕ್ಕೆ ನಿದರ್ಶನ ಈ ಉಪ ಚುನಾವಣೆಯ ಫಲಿತಾಂಶ. ಈ ಗೆಲುವಿನಿಂದ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಮತದಾರರ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ" ಎಂದು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಹೇಳಿದ್ದಾರೆ.
ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಕ್ಷದ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದರು. ಕೇಂದ್ರ ಹಾಗೂ ರಾಜ್ಯದ ಹಿರಿಯ ನಾಯಕರೂ ಕ್ಷೇತ್ರದ ಗೆಲುವಿಗೆ ಶ್ರಮಿಸಿದ್ದಾರೆ. ಅವರ ಈ ಕೊಡುಗೆಗೆ ಪ್ರತಿಯಾಗಿ ನಾನು ಜನರ ಸೇವೆ ಮಾಡಲು ಶ್ರಮಿಸುವೆ. ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ಗೆ ಶೇ.4ರಷ್ಟು ಮತ ಹೆಚ್ಚು ಬಂದಿದೆ. ಜಿಲ್ಲೆಗೆ ಪತಿ ತುಕಾರಾಮ್ ಸಂಸದರಾಗಿ, ನಾನು ತಾಲೂಕು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಕ್ಷೇತ್ರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಸ್ ನಿಲ್ದಾಣ ಅಭಿವೃದ್ಧಿ ಮಾಡಲು ಮೊದಲು ಅದ್ಯತೆ ನೀಡುವೆ" ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದ ಅನ್ನಪೂರ್ಣ: ಕೈ ಕಾರ್ಯಕರ್ತರೆದುರು ತೊಡೆ ತಟ್ಟಿದ ಬಿಜೆಪಿ ಅಭ್ಯರ್ಥಿ ಬಂಗಾರು (ETV Bharat) ಪತ್ನಿ ಗೆಲುವಿನ ಬಳಿಕ ಸಂಸದ ಈ.ತುಕಾರಾಂ ಪ್ರತಿಕ್ರಿಯೆ:"ನಮ್ಮ ಪಕ್ಷದ ಎಲ್ಲ ಹೈಕಮಾಂಡ್ ನಾಯಕರಿಗೂ ಅಭಿನಂದನೆಗಳು. ಸಿಎಂ, ಡಿಸಿಎಂ ಸೇರಿ ಹಲವು ಸಚಿವರು ನಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ಅನ್ನಪೂರ್ಣ ತುಕಾರಂ ಮೇಲೆ ವಿಶ್ವಾಸವಿಟ್ಟು ಜನರು ಆಶೀರ್ವಾದ ಮಾಡಿದ್ದಾರೆ. ಸಂಡೂರು ಕುಮಾರಸ್ವಾಮಿ ದೇವರ ಆಶೀರ್ವಾದವೂ ನಮ್ಮ ಮೇಲಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಸೋಲಿನ ಹತಾಶೆಯಿಂದ ಬಿಜೆಪಿಗರು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಸೋಲಿನ ಬಗ್ಗೆ ಪ್ರತಿಕ್ರಿಯೆ ಕೊಡಲು ಏನು ಇಲ್ಲದ ಕಾರಣ ಹೀಗೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಗಂಧ ಗಾಳಿ ಗೊತ್ತಿಲ್ಲದವರ ಬಗ್ಗೆ ನಾನು ಏನು ಮಾತನಾಡಲ್ಲ. ನಾನು, ನನ್ನ ಪತ್ನಿ ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ಜೋಡೆತ್ತು ರೀತಿಯಲ್ಲಿ ಕೆಲಸ ಮಾಡುತ್ತೇವೆ. ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದಾಗ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕುಖ್ಯಾತಿ ಆಗಿತ್ತು. ಜನರು ಜಾಗೃತರಾಗಿದ್ದಾರೆ ಅಂತಹವರನ್ನು ತಿರಸ್ಕಾರ ಮಾಡಿದ್ದಾರೆ" ಎಂದು ಹೇಳಿದರು.
ಕೈ ಕಾರ್ಯಕರ್ತರ ಎದುರು ತೊಡೆ ತಟ್ಟಿದ ಬಂಗಾರು ಹನುಮಂತು:ಸಂಡೂರು ಉಪಚುನಾವಣಾ ಕದನದ ಫಲಿತಾಂಶ ಹೊರಬಿದ್ದ ಬಳಿಕ ಹೊರ ಬರುತ್ತಿರುವ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಎದುರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತೊಡೆ ತಟ್ಟಿದ ಘಟನೆ ನಡೆಯಿತು.
ಉಪಚುನಾವಣೆಯ ಮತ ಎಣಿಕೆಯ ಎಲ್ಲ ಹಂತಗಳು ಪೂರ್ಣಗೊಂಡ ಬಳಿಕ ಸೋಲಿನ ಫಲಿತಾಂಶ ಒಪ್ಪಿಕೊಂಡು ಬಂಗಾರು ಹೊರ ನಡೆಯುತ್ತಿದ್ದರು. ಈ ವೇಳೆ ಗೇಟ್ ಮುಂದೆ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಆಗಮಿಸುತ್ತಿದ್ದ ವೇಳೆ ಮತ್ತಷ್ಟು ಜೋರಾಗಿ ಕೇಕೆ ಹಾಕಿದರು. ಈ ವೇಳೆ "ಏ ಇಲ್ಲಿ ಬರ್ರಿ" ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತೊಡೆ ತಟ್ಟಿ ಮುಂದೆ ಹೋದರು. ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಯಿತು.
ಇದನ್ನೂ ಓದಿ:ಕರ್ನಾಟಕ ಉಪಸಮರ : ಕಾಂಗ್ರೆಸ್ಗೆ ಕೈ ಹಿಡಿದ 'ಗ್ಯಾರಂಟಿ' ಯೋಜನೆಗಳು, ಫಲ ನೀಡಿತು ಅಭ್ಯರ್ಥಿ ಆಯ್ಕೆ ಚತುರತೆ