ಕರ್ನಾಟಕ

karnataka

ETV Bharat / state

ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಶೀಘ್ರದಲ್ಲೇ ಹೆಚ್ಚಳ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - Lakshmi Hebbalkar Answer - LAKSHMI HEBBALKAR ANSWER

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಕುರಿತು ಸದನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೌರವ ಧನ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

LAKSHMI HEBBALKAR ANSWER
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

By ETV Bharat Karnataka Team

Published : Jul 24, 2024, 5:03 PM IST

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಬಂದಿದ್ದು, ಶೀಘ್ರವೇ ಹೆಚ್ಚಳ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ವೇಳೆ ಸುಳ್ಯ ಕ್ಷೇತ್ರದ ಬಿಜೆಪಿ ಸದಸ್ಯೆ ಭಾಗೀರಥಿ ಮುರಳ್ಯ ಅವರ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಅನುದಾನ ಮಾತ್ರವಲ್ಲ, ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಕೂಡಲೇ ಭರ್ತಿ ಮಾಡಬೇಕೆಂದು ಪ್ರತಿಪಕ್ಷ ನಾಯಕರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೇಮಕಾತಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳ ಮಾಡಿದ್ದರು. ಆದಾದ ಮೇಲೆ ಗೌರವಧನ ಹೆಚ್ಚಳವನ್ನೇ ಮಾಡಿಲ್ಲ. ಈಗ ಗೌರವಧನ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸದನಕ್ಕೆ ಸಚಿವರು ತಿಳಿಸಿದರು.

ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರ ಪರಿಗಣನೆ: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರನ್ನು ಪರಿಗಣಿಸಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಶಾಸಕಿ ನಯನ ಮೋಟಮ್ಮ ರವರ ಪ್ರಶ್ನೆಗೆ ಉತ್ತರಿಸಿದರು.

ಕರ್ನಾಟಕದ ಗ್ಯಾರಂಟಿ ಯೋಜನೆಯಡಿ ಲಿಂಗತ್ವ ಅಲ್ಪಂಸಂಖ್ಯಾತರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ. ನ್ಯಾಷನಲ್ ಪೋರ್ಟಲ್ ಫಾರ್ ಟ್ರಾನ್ಸ್‌ಝೆಂಡರ್ಸ್ ಸರ್ಟಿಫಿಕೇಷನ್ ವತಿಯಿಂದ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ಎರಡು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರು: ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣದ ಬಗ್ಗೆ ಮೂಡಿಗೆರೆಯ ಆಡಳಿತ ಪಕ್ಷದ ಸದಸ್ಯೆ ನಯನಾ ಮೋಟಮ್ಮ ಅವರು ಕೇಳಿದ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು, 2011ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇನ್ನು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳಿಂದ ಪಡೆದ ಅಂಕಿ-ಅಂಶಗಳ ಪ್ರಕಾರ 43,752 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2012-13ನೇ ಸಾಲಿನಿಂದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಆದಾಯ ಉತ್ಪನ್ನ ಚಟುವಟಿಕೆಯನ್ನು ಕೈಗೊಳ್ಳಲು 30 ಸಾವಿರ ರೂ.ಗಳ ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಯಡಿ ಈವರೆಗೂ 9,211 ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಮೈತ್ರಿ ಯೋಜನೆಯಡಿ ಒಟ್ಟು 2052 ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ 1200 ರೂ. ಪಿಂಚಣಿಯನ್ನು ನೀಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ನೌಕರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ. 1 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಳಕ್ಕೆ ಕ್ರಮ: ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಬಾಡಿಗೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನ ಬಾಡಿಗೆ ಪಾವತಿಗೆ ಅನುದಾನದ ಕೊರತೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬಿಜೆಪಿ ಸದಸ್ಯ ಎಲ್. ಎ. ರವಿ ಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದರು.

ಈಗಾಗಲೇ 2024-25ನೇ ಸಾಲಿನ ಡಿಸೆಂಬರ್ ತಿಂಗಳವರೆಗೆ ಅಂಗನವಾಡಿ ಕೇಂದ್ರಗಳ ಬಾಡಿಗೆ ಮೊತ್ತವನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಂಗನವಾಡಿ ಕೇಂದ್ರಗಳ ಮಕ್ಕಳು, ಇತರೆ ಫಲಾನುಭವಿಗಳು ಇಲಾಖೆಯ ಯಾವುದೇ ಸೇವೆಗಳಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ. ಸ್ವಂತ ಕಟ್ಟಡಗಳಿಲ್ಲದ ಪ್ರದೇಶದಲ್ಲಿ ಅಂಗನವಾಡಿಗಳನ್ನು ಬಿಬಿಎಂಪಿ, ಇನ್ನಿತರ ಸರ್ಕಾರಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಕೆಲವೆಡೆ ಉತ್ತಮ ಮೂಲ ಸೌಕರ್ಯವುಳ್ಳ ಬಾಡಿಗೆ ಕಟ್ಟಡಗಳಲ್ಲೂ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಸದನಕ್ಕೆ ವಿವರಿಸಿದರು.

ಇದನ್ನೂ ಓದಿ:ರಾಜಸ್ವ-ಬಂಡವಾಳ ತಪ್ಪು ವರ್ಗೀಕರಣ, ರಾಜಸ್ವ ವೆಚ್ಚ ₹50.35 ಕೋಟಿ ಕಡಿಮೆ: ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗ - Audit Report

ABOUT THE AUTHOR

...view details