ಬೆಂಗಳೂರು:ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿಯಂತ್ರಿಸಲು ಮತ್ತು ಸಸ್ಯ ಸಂಪತ್ತು ರಕ್ತ ಚಂದನ ಅಕ್ರಮ ತಡೆಯುವ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ಮಾಡಿದರು. ಬಳಿಕ ವಿಧಾನಸೌಧಕ್ಕೆ ಬಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಕುವೆಂಪು ಅವರು ಬರೆದಿರುವ ಪರಿಸರ ಬಗೆಗಿನ ಸಾಲುಗಳನ್ನು ಓದಿದರು. "ಕುವೆಂಪು ಅವರ ಬಗ್ಗೆ ಓದಿಕೊಂಡಿದ್ದೇನೆ. ಅವರ ಪುಸ್ತಕಗಳ ಬಗ್ಗೆ ಅಪಾರ ಗೌರವವಿದೆ. ನಾನು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಒತ್ತು ನೀಡುತ್ತೇನೆ. ಕನ್ನಡ ಭಾಷೆ ಬಗ್ಗೆ ಹೆಮ್ಮೆ ಹಾಗೂ ಗೌರವವಿದೆ. ಕನ್ನಡದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಡಾ.ರಾಜ್ ಕುಮಾರ್ ಅವರು ಗಂಧದ ಗುಡಿ ಸಿನಿಮಾ ಮಾಡಿ ಅರಣ್ಯ ಸಂಪತ್ತು ಹಾಗೂ ಅದರ ರಕ್ಷಣೆ ಬಗ್ಗೆ ತಿಳಿಸಿದ್ದಾರೆ. ಇಂದಿನ ಕಾರ್ಯಕ್ರಮದಿಂದಾಗಿ ಕನ್ನಡ ಕಲಿಯಬೇಕು ಎಂಬ ಉತ್ಸಾಹ ಹೆಚ್ಚಾಯಿತು. ಕರ್ನಾಟಕದ ಜನರ ಪ್ರೀತಿಗೆ ಪಾತ್ರನಾಗಬೇಕು ಎಂದು ಬಯಸುತ್ತೇನೆ. ಕನ್ನಡ ಕಲಿಯಬೇಕು, ಕನ್ನಡದಲ್ಲೇ ಮುಂದೆ ಮಾತನಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಕನ್ನಡಿಗರು ಕೂಡ ನನಗೆ ಸಿನಿಮಾ ನಟನಾಗಿ ಬಹಳ ಪ್ರೀತಿ ನೀಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.
ಅರಣ್ಯ ಸಂರಕ್ಷಣೆ ಬಗ್ಗೆ ಸಿನಿಮಾ ಮೂಲಕ ಮಾಡಲು ಸಾಧ್ಯ ಆಗದೇ ಇರುವುದನ್ನು ಜನಪ್ರತಿನಿಧಿಯಾಗಿ ಸಾಧಿಸಲು ಆಂಧ್ರಪ್ರದೇಶದ ಜನರು ಅವಕಾಶ ನೀಡಿದ್ದಾರೆ ಎಂದರು. ಇದೇ ವೇಳೆ ಶ್ರೀಶೈಲಂ, ತಿರುಪತಿಗೆ ರಾಜ್ಯದ ಭಕ್ತರು ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಜೊತೆ ಸಹಕರಿಸುವುದಾಗಿ ಡಿಸಿಎಂ ಭರವಸೆ ನೀಡಿದರು.