ಗಂಗಾವತಿ(ಕೊಪ್ಪಳ):ನನ್ನ ಕಷ್ಟಕಾಲದಲ್ಲಿ ನೀವು ಕರ್ನಾಟಕದಲ್ಲಿ ಪ್ರತಿಭಟನೆ ಮಾಡುವ ಮೂಲಕ ನನಗೆ ಮಾನಸಿಕ ಧೈರ್ಯ ತುಂಬಿದ್ದೀರಿ. ನಿಮ್ಮ ಋಣ ಎಂದಿಗೂ ಮರೆಯುವುದಿಲ್ಲ. ಅತೀ ಶೀಘ್ರ ಗಂಗಾವತಿಗೆ ಬಂದು ಧನ್ಯವಾದ ಹೇಳುವೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಭರವಸೆ ನೀಡಿದರು.
ನೂತನ ಮುಖ್ಯಮಂತ್ರಿಯಾಗಿ ನಾಯ್ಡು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಶ್ರೀರಾಮನಗರ, ಕಾರಟಗಿ, ಸಿಂಧನೂರು ಭಾಗದ ಜನರ ನಿಯೋಗ ನಾಯ್ಡು ಅವರನ್ನು ಇಂದು ಭೇಟಿ ಮಾಡಿದೆ.
ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿ ನಾನು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜೈಲುಪಾಲಾಗಿರುವ ಸಂದರ್ಭದಲ್ಲಿ ನೀವು ನನ್ನ ಪರವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರಿ, ಪ್ರತಿಭಟನೆ ಮಾಡಿ ನೈತಿಕ ಸ್ಥೈರ್ಯ ನೀಡಿದ್ದೀರಿ. ಹೀಗಾಗಿ ಶೀಘ್ರದಲ್ಲೇ ಗಂಗಾವತಿಗೆ ಭೇಟಿ ನೀಡುತ್ತೇನೆ. ಧನ್ಯವಾದ ಸಲ್ಲಿಸುವ ಉದ್ದೇಶಕ್ಕೆ ಬಂದು ನಿಮ್ಮನ್ನೆಲ್ಲರನ್ನೂ ಭೇಟಿಯಾಗುತ್ತೇನೆ. ನಿಮ್ಮೆಲ್ಲರ ಮೂಲ ತಾಯ್ನೆಲ ಆಂಧ್ರವಾಗಿದ್ದು, ಆಂಧ್ರದ ನೂತನ ರಾಜಧಾನಿ ನಿರ್ಮಾಣ ಸಂದರ್ಭದಲ್ಲಿ ವಲಸಿಗ ಪ್ರಮುಖರನ್ನು ಆಹ್ವಾನಿಸುತ್ತೇನೆ ಎಂದು ನಾಯ್ಡು ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದ ಸದಸ್ಯರು ತಿಳಿಸಿದ್ದಾರೆ.