ಮೈಸೂರು: ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜುಲೈ 24ರಂದು ಮಹಿಳೆಯೊಬ್ಬರು ಅನುಚಿತ ವರ್ತನೆ ತೋರಿ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆಂದು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ನಗರದ ಲೋಕಾಯುಕ್ತ ಕಚೇರಿಗೆ ಇಂದು ಭೇಟಿ ನೀಡಿ ಮುಡಾ ತನಿಖೆ ಸಂಬಂಧ ಸಮಗ್ರ ಮಾಹಿತಿಗಳನ್ನೊಳಗೊಂಡ ಮನವಿ ಪತ್ರ ನೀಡಿ ಮಾತನಾಡಿದ ಅವರು, ಪೊಲೀಸರು ಈ ಕುರಿತು ಸೂಕ್ತ ನಡೆಸಿ ಸತ್ಯಾಂಶ ಹೊರ ತರಬೇಕು. ಮಹಿಳೆಯು ಸುಳ್ಳು ಆರೋಪ ಮಾಡಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿ ಇದಕ್ಕೆ ಕುಮ್ಮಕ್ಕು ನೀಡಿದವರನ್ನೂ ಸಹ ಬಂಧಿಸಬೇಕೆಂದು ನಾನು ಈಗಾಗಲೇ ಮೈಸೂರಿನ ಎಸ್ಪಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ (ETV Bharat) ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇದರಿಂದ ಭಯಪಟ್ಟು ನನ್ನ ಹೋರಾಟದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಗುರಿ ಮುಟ್ಟುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ, ನನ್ನ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ನಾನು ಬಗ್ಗುವುದಿಲ್ಲ ಎಂದರು.
ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ:ಮುಡಾ ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ‍್ಯಾರನ್ನು ವಿಚಾರಣೆ ನಡೆಸಬೇಕು, ಯಾವ ಸಾಕ್ಷಿಗಳನ್ನು ಸಂಗ್ರಹಿಸಿ ಯಾರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಬೇಕು ಎಂಬ ವಿಷಯ ಸಂಬಂಧ ವಿವರವಾದ ಅಂಶಗಳನ್ನೊಳಗೊಂಡ ಮನವಿ ಪತ್ರವನ್ನು ಲೋಕಾಯುಕ್ತ ಎಸ್ಪಿ ಇಲ್ಲದ ಕಾರಣ ಕಚೇರಿಯ ಅಧಿಕಾರಿಗಳಿಗೆ ಕೊಟ್ಟು, ಸ್ವೀಕೃತಿ ಪತ್ರ ಪಡೆದಿದ್ದೇನೆ ಎಂದರು.
ನನಗಿರುವ ಮಾಹಿತಿ ಪ್ರಕಾರ ಈಗಾಗಲೇ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆಯನ್ನು ಪ್ರಾರಂಭ ಮಾಡಿದ್ದಾರೆ. ಒಟ್ಟು ನಾಲ್ಕು ತಂಡಗಳನ್ನು ರಚಿಸಿ ತನಿಖೆ ಶುರು ಮಾಡಿದ್ದಾರೆ. ಮುಂದೆ ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಈಗಾಗಲೇ ನಾವು ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದೇವೆ. ಇಷ್ಟೇ ಅಲ್ಲದೆ ಇ.ಡಿ. ತನಿಖೆ ನಡೆಸಬೇಕು ಎಂದು ಕಳೆದ ಶುಕ್ರವಾರ ಇ - ಮೇಲ್ ಮೂಲಕ ದೂರು ಕಳುಹಿಸಿದ್ದೇನೆ. ಇಂದು ಖುದ್ದಾಗಿ ಅವರ ಕಚೇರಿಗೆ ಹೋಗಿ ದೂರು ಅರ್ಜಿಯನ್ನು ಕೊಟ್ಟು, ಸ್ವೀಕೃತಿ ಪತ್ರ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಹೆಚ್. ವಿಶ್ವನಾಥ್ ಆಗ್ರಹ - Muda Case