ಹುಬ್ಬಳ್ಳಿ :ಇಲ್ಲಿನ ನೆಹರು ಮೈದಾನದಲ್ಲಿ ಬೃಹತ್ ತಕ್ಕಡಿಯಲ್ಲಿ ತುಲಾಭಾರ ನಡೆಸಲಾಯಿತು. 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದರು.
ಇದಕ್ಕೂ ಮೊದಲು ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವದ ಹಿನ್ನೆಲೆ ಆನೆ ಅಂಬಾರಿ ಮೆರವಣಿಗೆ ನಡೆಸಲಾಯಿತು. ಮೂರು ಸಾವಿರ ಮಠದಿಂದ ನಡೆದ ಮೆರವಣಿಯಲ್ಲಿ ಐದು ಆನೆ, ಐದು ಒಂಟೆ, ಐದು ಕುದುರೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಫಕೀರ ಸಿದ್ಧರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಮೂಜಗು ಸ್ವಾಮೀಜಿಗಳು ಸೇರಿ ಭಾವೈಕ್ಯತಾ ರಥಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
5555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿಯೊಂದಿಗೆ ತುಲಾಭಾರ: ಭಾರತದಲ್ಲೇ ಪ್ರಥಮ ಬಾರಿಗೆ ಶ್ರೀಗಳನ್ನು ಒಳಗೊಂಡಂತೆ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರ ನಡೆಸಲಾಯಿತು. ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಪೀಠಾಧಿಪತಿ ಜ. ಫಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವದ ನಿಮಿತ್ತ ಈ ತುಲಾಭಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತುಲಾಭಾರಕ್ಕೆ 22 ಲಕ್ಷ ರೂ. ವೆಚ್ಚದಲ್ಲಿ 40 ಅಡಿ ಉದ್ದ, 30 ಅಡಿ ಎತ್ತರ ಹಾಗೂ 20 ಅಡಿ ಅಗಲ ಇರುವ ಕಬ್ಬಿಣದ ಬೃಹದಾಕಾರದ ತಕ್ಕಡಿ ಸಿದ್ಧಪಡಿಸಲಾಗಿತ್ತು. ರಾಯಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದು ಈ ಬೃಹದಾಕಾರದ ತಕ್ಕಡಿಯನ್ನು ತಯಾರಿಸಿದೆ. ಇದು 25 ಟನ್ ತೂಗುವ ಸಾಮರ್ಥ್ಯ ಹೊಂದಿರುವುದು ಮತ್ತೊಂದು ವಿಶೇಷ.