ಬೆಂಗಳೂರು:ದಶಕದ ಕಾಯುವಿಕೆ ಬಳಿಕ ಇದೀಗ ನಾಳೆ ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿದೆ. ಆ ಮೂಲಕ ಅನೇಕ ವಿಳಂಬ, ಗಣನೀಯ ಪ್ರಮಾಣದ ಯೋಜನಾ ವೆಚ್ಚ ಹೆಚ್ಚಳ, ವಿರೋಧ, ಪ್ರತಿರೋಧಗಳ ಮಧ್ಯೆ ಕುಟುಂತ್ತಾ ಸಾಗುತ್ತಿರುವ ಯೋಜನೆ ದಶಕದ ಬಳಿಕ ಮೊದಲ ಯಶಸ್ವಿ ಹೆಜ್ಜೆ ಇಡುತ್ತಿದೆ.
ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಿಗೆ ಹರಿಸುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಇದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕುಗಳ 38 ಪಟ್ಟಣ ಪ್ರದೇಶಗಳ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು. ಹಾಗೂ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 9.953 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂರ್ತಜಲ ಮರುಪೂರಣ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಯೋಜನಾ ವೆಚ್ಚ:ಎತ್ತಿನ ಹೊಳೆ ಯೋಜನಾ ವೆಚ್ಚ ದುಪ್ಪಟ್ಟು ಏರಿಕೆಯಾಗಿರುವುದು ದೊಡ್ಡ ವಿರೋಧ, ಟೀಕೆಗಳಿಗೆ ಕಾರಣವಾಗಿದೆ. ಯೋಜನೆಯ ಮೂಲ ಅಂದಾಜು ಮೊತ್ತ 8,323.50 ಕೋಟಿಗಳಾಗಿತ್ತು. ಈ ಸಂಬಂಧ ಸರ್ಕಾರ 2012ರ ಜುಲೈ 13ರಂದು ಆದೇಶ ಹೊರಡಿಸಿತ್ತು. ದರ ಪರಿಷ್ಕರಣೆ ಮತ್ತು ಭೂಸ್ವಾಧೀನದಿಂದಾಗಿ ರೂ. 12,912.36 ಕೋಟಿಗಳ ಮೊತ್ತದ ಪರಿಷ್ಕೃತ ಯೋಜನಾ ವರದಿಗೆ 2014ರ ಫೆಬ್ರವರಿ 17ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಇತ್ತೀಚೆಗೆ ಹೊಸ ಭೂಸ್ವಾಧೀನ ಕಾಯ್ದೆಯ ಅನುಷ್ಠಾನ, ದರ ಪರಿಷ್ಕರಣೆ, ಟೆಂಡರ್ ಪ್ರೀಮಿಯಂ, ಸರಕು ಮತ್ತು ಸೇವಾ ತೆರಿಗೆಯ (GST) ಹೆಚ್ಚಳ, ಯೋಜನೆಯಲ್ಲಿ ಅವಶ್ಯವಿರುವ ಹೆಚ್ಚುವರಿ ಕಾಮಗಾರಿಗಳ ಅಳವಡಿಕೆ (ಪಥ ಬದಲಾವಣೆಯಿಂದ) ಮತ್ತು ಫೀಡರ್ ಕಾಲುವೆಗಳಲ್ಲಿ ತೆರೆದ ಕಾಲುವೆ ಬದಲಾಗಿ ಪೈಪ್ಲೈನ್ಗಳ ಅಳವಡಿಕೆ ಈ ಎಲ್ಲ ಕಾರಣಗಳಿಂದ ಯೋಜನೆಯ ಅಂದಾಜು ಮೊತ್ತ ಮತ್ತೆ ಗಣನೀಯವಾಗಿ ಹೆಚ್ಚಾಗಿದೆ. ಅದರಂತೆ ಯೋಜನೆಯ ಅಂದಾಜು ಮೊತ್ತ ರೂ.23,251.66 ಕೋಟಿಗಳಿಗೆ ಏರಿಕೆ ಕಂಡಿದೆ. ಈ ಸಂಬಂಧ ಪುನರ್ ಪರಿಷ್ಕೃತ ಯೋಜನಾ ವರದಿಗೆ 2023ರ ಜನವರಿ 10ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹತ್ತು ಹಲವು ವಿಳಂಬಗಳಿಂದ ವೇಗ ಕಳೆದ ಯೋಜನೆ:ದಶಕದ ಹಿಂದೆ ಆರಂಭವಾದ ಎತ್ತಿನಹೊಳೆ ಕಾಮಗಾರಿ ಕುಂಟುತ್ತಾ, ಆಮೆಗತಿಯಲ್ಲಿ ಸಾಗಿದೆ. ಹಲವು ಡೆಡ್ಲೈನ್ಗಳನ್ನೂ ಪೂರೈಸಲಾಗದೇ ಇದೀಗ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಏತ ಕಾಮಗಾರಿಗೆ ಅರಣ್ಯ ಇಲಾಖೆ ಮಂಜೂರಾತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ (NGT) ಒಟ್ಟು 7 ಪ್ರಕರಣಗಳು ದಾಖಲಾಗಿತ್ತು. ಇದರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳು 2019ರ ಮೇ 24ರಂದು ಇತ್ಯರ್ಥವಾಯಿತು.