ಉಡುಪಿ: ಸಮುದ್ರ ತೀರದಲ್ಲಿ ಅಂಬರ್ಗ್ರಿಸ್ ಮಾರಾಟದ ಬಗ್ಗೆ (ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ವೀಕ್ಷಣಾ ದಳದ ಅಧಿಕಾರಿಗಳ ಮೇಲೆ ಸ್ಥಳೀಯರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಎಂ.ಕೋಡಿಯಲ್ಲಿ ಬುಧವಾರ ನಡೆದಿದೆ.
ಕುಂದಾಪುರ ತಾಲೂಕಿನ ಕೋಡಿಯ ಸೌಹಾರ್ದ ಭವನದಲ್ಲಿ ಅಂಬರ್ಗ್ರಿಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 1.40ರ ವೇಳೆಗೆ ಮಂಗಳೂರಿನ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಎಸ್.ಐ ಜಾನಕಿ ಹಾಗೂ ಸಿಬ್ಬಂದಿ ಮಾರುವೇಷದಲ್ಲಿ ತೆರಳಿದ್ದರು. ಶೋಧ ಕಾರ್ಯಾಚರಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆಯುವ ವೇಳೆ ಅಧಿಕಾರಿಗಳ ತಂಡದ ಮೇಲೆ ತಪ್ಪು ಗ್ರಹಿಕೆ ಮಾಡಿ ಆರೋಪಿಗಳು ಹಾಗೂ ಸ್ಥಳೀಯರು ಸೇರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತುಕೊಂಡಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಾದ ಜಯಕರ ರತ್ನಾಕರ್, ಅಬೂಬಕ್ಕರ್, ಆಸೀಫ್ ಸೇರಿದಂತೆ ಇತರರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.