ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ , ಶಾಸಕ ಎನ್.ಹೆಚ್. ಕೋನರೆಡ್ಡಿ ಹೇಳಿಕೆ (ETV Bharat) ಧಾರವಾಡ: ಜಿಲ್ಲೆಯ ನವಲಗುಂದ ವಿಧಾನಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಚಕ್ಕಡಿ ರಸ್ತೆಗೆ ಯಾವುದೇ ರಾಜಧನ ಕಟ್ಟದೆ ಮಣ್ಣು ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಆರೋಪಿಸಿದ್ದಾರೆ.
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಆರೋಪ: "ನಮ್ಮ ರೈತರ ನಾಡಿನಲ್ಲಿ ಚಕ್ಕಡಿ ರಸ್ತೆ ಹಗರಣವಾಗುತ್ತಿದೆ. ಒಂದು ವರ್ಷದಲ್ಲಿ ಕೋಟ್ಯಂತರ ರೂ. ಹಣ ತೆಗೆದುಕೊಂಡು ಬಂದು, ಯಾವುದೇ ಪಾರದರ್ಶಕ ಕಾನೂನನ್ನು ಪಾಲನೆ ಮಾಡದೆ ರಸ್ತೆ ಮಾಡಲಾಗುತ್ತಿದೆ. ಇವತ್ತು ನವಲಗುಂದದ ಇತಿಹಾಸದ ಗುಡ್ಡದ ಮಣ್ಣನ್ನು ಬಳಕೆ ಮಾಡಲಾಗುತ್ತಿದೆ. ನವಲಗುಂದದಲ್ಲಿ ಗಣಿಗಾರಿಕೆಯನ್ನು 10-20 ವರ್ಷದಿಂದ ಬಂದ್ ಮಾಡಲಾಗಿದೆ. ಆದರೆ ಈಗ ಅಲ್ಲಿಂದ ಸಾವಿರಾರು ಟ್ರಿಪ್ ಅಲ್ಲಿ ಮಣ್ಣನ್ನು ತೆಗೆದುಕೊಂಡು ಬಂದು ರಸ್ತೆಗಳಿಗೆ ಬಳಕೆ ಮಾಡುತ್ತಿರುವುದು ಖಂಡನೀಯ."
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರಿಂದ ಸ್ಥಳ ಪರಿಶೀಲನೆ (ETV Bharat) "ಜಿಲ್ಲಾ ಪಂಚಾಯತ್ ರಸ್ತೆ ಸೇರಿದಂತೆ ಉಳಿದ ಕಡೆಯ ಡಾಂಬಾರ್ ರಸ್ತೆಯನ್ನು ತೆಗೆದು ಹಾಕಿ ಚಕಡಿ ರಸ್ತೆಯನ್ನು ಮಾಡಿ ಯಾವುದೋ ಒಂದು ಇಲಾಖೆಯಿಂದ ಹಣವನ್ನು ಪಡೆಯಯುವಂತ ಕೆಲಸ ನಡೆದಿದೆ ಎಂಬುದು ನನ್ನ ಗಮನಕ್ಕೆ ಬಂದಿರುವ ವಿಷಯ. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಗೊತ್ತಾಗುತ್ತದೆ. ಇದರ ಹಿಂದೆ ಯಾರು ಇದ್ದಾರೆ, ಯಾರು ಕೋಟ್ಯಂತರ ರೂ. ಹಣ ತೆಗೆದುಕೊಂಡು ಬಂದಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಆದರೆ ಅದನ್ನು ಬಿಡುಗಡೆ ಮಾಡಿದರೆ ತನಿಖೆಗೆ ತೊಂದರೆಯಾಗುತ್ತದೆ. ಸಮಗ್ರ ತನಿಖೆಯಾಗಬೇಕು. ಯಾರೇ ಆಗಿರಲಿ ತಪ್ಪಿತಸ್ಥರ ವಿರುದ್ಧ ಕಾನೂನು ಜರಗಬೇಕು" ಎಂದು ಮಾಜಿ ಸಚಿವರು ಆಗ್ರಹಿಸಿದ್ದಾರೆ.
ಶಾಸಕ ಎನ್.ಹೆಚ್. ಕೋನರೆಡ್ಡಿ ಪ್ರತಿಕ್ರಿಯೆ: "ಅವರು ಗುಡ್ಡದ ಮಣ್ಣು ತೆಗೆದರು, ಅದು ಇದು ಎಂದು ಹೇಳಿರುವ ಶಂಕರಪಾಟೀಲ್ ಅವರೂ ಕೂಡ ಅಧಿಕಾರದಲ್ಲಿದ್ದಾಗ ಎಲ್ಲಿ ಬೇಕು ಅಲ್ಲಿ ಮಣ್ಣು ತೆಗೆದುಹಾಕಿದ್ದರು. ನಾನು ಕೂಡ ಅಧಿಕಾರದಲ್ಲಿ ಇದ್ದಾಗ ಮಣ್ಣು ತೆಗೆಯುತ್ತೇನೆ. ಈಗ ನಿರಂತರವಾಗಿ ಮಳೆ ಬರುತ್ತಿದೆ. 22 ದಿವಸ ಮಳೆ ಆಗಿ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಅನಿವಾರ್ಯವಾಗಿ ಮಣ್ಣು ಹಾಕಬೇಕಾಗಿದೆ. ರಾಜಧನ ಲೂಟಿ ಮಾಡುತ್ತಾರೆ ಎಂದು ಅವರು ಕೆಲವು ಲೋಪಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ ಯಾವುದು ಲೂಟಿ ಮಾಡಲು ಆಗುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.
"ನಾನು ಅಧಿಕಾರದಲ್ಲಿ ಇದ್ದಾಗಲೂ ಸರ್ಕಾರದ ಬಿಲ್ ಪಾಸ್ ಆಗಬೇಕಾದರೆ, ಅನುದಾನ ಸಿಗದೇ ಪಾಸ್ ಆಗಲು ಸಾಧ್ಯವಿಲ್ಲ. ಈ ಕಾನೂನು ಎಲ್ಲರಿಗೂ ಗೊತ್ತಿರುವಂಥದ್ದು. ಆದರೆ ಅವರಿಗೆ ಯಾಕೆ ತಪ್ಪು ಕಲ್ಪನೆಯಾಗಿದೆಯೋ ಗೊತ್ತಿಲ್ಲ. ಅವರು 5 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಅನ್ನೋದರ ಬಗ್ಗೆ ನಾನು ಚರ್ಚೆ ಮಾಡಿಲ್ಲ. ನಾನು ಅವರ ಬಗ್ಗೆ ಋಣಾತ್ಮಕವಾಗಿಯೂ ಮಾತನಾಡಲ್ಲ. ಆದರೆ ನನಗೆ ಅಭಿವೃದ್ಧಿ ಬಹಳ ಮುಖ್ಯ. ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಅಂತ ಇದ್ದೇನೆ. ಈ ಕೆಲಸಕ್ಕೆ ಜನರ ಆಶೀರ್ವಾದ ಇದೆ. ಒಂದು ದೊಡ್ಡ ಪ್ರಯೋಗ ಮಾಡುತ್ತಿದ್ದೇವೆ. ಅದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡುತ್ತೇನೆ. ಟೀಕೆ ಟಿಪ್ಪಣಿ ಮಾಡುವುದು ದೊಡ್ಡದಲ್ಲ. ಆದರೆ ಅದಕ್ಕಿಂತ ಅಭಿವೃದ್ಧಿ ದೊಡ್ಡದು" ಎಂದು ಕೋನರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ನಾವು ಮೊದಲು ಹಿಂದೂ, ನಂತರ ವೀರಶೈವ ಲಿಂಗಾಯತ: ವಚಾನನಂದ ಸ್ವಾಮೀಜಿ ಹೇಳಿಕೆ - vachananda swamiji