ಬೆಂಗಳೂರು: ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ಬೀದರ್ನಿಂದ ಜನಜಾಗೃತಿ ಅಭಿಯಾನ ನಡೆಸಲು ಬಿಜೆಪಿ ಭಿನ್ನಮತೀಯರ ತಂಡ ನಿರ್ಧರಿಸಿದೆ.
ಸದಾಶಿನಗರದಲ್ಲಿರುವ ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚಿಹ್ನೆಯಡಿ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಿರುವ ಭಿನ್ನಮತೀಯ ನಾಯಕರು, ಸಾರ್ವಜನಿಕರು ವಕ್ಫ್ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ 9035675734 ವಾಟ್ಸ್ಆ್ಯಪ್ ನಂಬರ್ಗೆ ಸಂದೇಶ ಕಳುಹಿಸಲು ಮನವಿ ಮಾಡಿದ್ದಾರೆ.
ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು- ಯತ್ನಾಳ್:ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, "ರೈತರು, ಮಠಗಳಿಗೆ ವಕ್ಫ್ ಆದೇಶದಿಂದ ಅನ್ಯಾಯವಾಗುತ್ತಿದೆ. ನಾವು ಕೇಳುತ್ತಿರುವುದು ಕ್ರಿಮಿನಲ್ ಪ್ರಕರಣಗಳು ರದ್ದಾಗಿ ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಮೂಲಕ ಜಂಟಿ ಸಂಸದೀಯ ಸಮಿತಿಗೆ ವರದಿಯನ್ನು ನೀಡುತ್ತೇವೆ. ಈಗಾಗಲೇ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ತರಲು ಮುಂದಾಗಿದೆ. ಎಷ್ಟೋ ಮಾಹಿತಿ ಯಾವುದೇ ಸರ್ಕಾರಕ್ಕೂ ಇಲ್ಲ" ಎಂದು ಹೇಳಿದರು.
"ರಾಜ್ಯದಲ್ಲಿ ಮೊದಲಿಗೆ ಒಂದು ಲಕ್ಷ ಎಕರೆ ಜಮೀನು ನಮೂದು ಇತ್ತು. ಈಗ 6 ಲಕ್ಷ ಎಕರೆ ಭೂಮಿ ವಕ್ಫ್ಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಇಡೀ ದೇಶದಲ್ಲಿ 38 ಲಕ್ಷ ಎಕರೆ ಜಮೀನು ನಮೂದು ಎನ್ನುತ್ತಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಹೈದರಾಬಾದ್ನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಲೀಗಲ್ ಟೀಂ ಮೂಲಕ ಹೋರಾಟ ಮಾಡುತ್ತಿದ್ದೇವೆ. ಅದರ ಜೊತೆಗೆ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
"ಜಮೀರ್ ಅಹಮದ್ ಖಾನ್ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮನ್ನು ಸೈತಾನ್ಗೆ ಹೋಲಿಸುತ್ತಿದ್ದಾರೆ. ಸಿಎಂ ಹೇಳಿದ್ದಾರೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಜಮೀರ್ ಬೆದರಿಕೆಗೆ ಬೆಚ್ಚಿ ಬಿದ್ದಿದ್ದಾರೆ. ಕೆಲವೊಂದಿಷ್ಟು ಮುಸ್ಲಿಂ ಸಮುದಾಯ ಕೂಡ ವಿರೋಧ ಮಾಡಿದೆ. ವಿಜಯಪುರ, ಧಾರವಾಡದಲ್ಲಿ ವಿರೋಧಿಸಿ ಧ್ವನಿ ಎತ್ತಿದ್ದಾರೆ" ಎಂದು ಹೇಳಿದರು.
"ಬಿಜೆಪಿ ನೋಟಿಸ್ ಕೊಟ್ಟಿದ್ದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೇ ವಕ್ಫ್ನಿಂದ ನೋಟಿಸ್ ಕೊಟ್ಟಿದ್ದರೂ ನಾವು ಸಮರ್ಥಿಸಿಕೊಳ್ಳುವುದಿಲ್ಲ. ಟ್ರಿಬ್ಯುನಲ್ ರದ್ದಾಗಬೇಕು ಎನ್ನುವುದಕ್ಕೆ ನಮ್ಮ ಹೋರಾಟ. ನೋಟಿಸ್ ಕೊಡದೇ ವಕ್ಫ್ ಎಂದು ನಮೂದು ಮಾಡಿದ್ದಾರೆ" ಎಂದು ಟೀಕಿಸಿದರು.