ಬೆಂಗಳೂರು:ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅರುಣ್ (38) ಆತ್ಮಹತ್ಯೆ ಮಾಡಿಕೊಂಡವರು.
ಅರುಣ್ ಅವರ ತಂದೆ ದೇವರಾಜ್ ನೀಡಿದ ದೂರಿನ ಮೇರೆಗೆ ಸಾಲ ನೀಡಿದ್ದ ದಿನೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕಾಶ್ ನಗರದಲ್ಲಿ ಕಳೆದ 20 ವರ್ಷಗಳಿಂದ ಅರುಣ್ ವಾಸಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ವ್ಯವಹಾರದ ಸಲುವಾಗಿ ಪೂಜಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ ದಿನೇಶ್ ಎಂಬವರನ್ನು 15 ದಿನಗಳ ಹಿಂದೆ ಭೇಟಿ ಮಾಡಿದ್ದ ಅರುಣ್, 6 ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಶ್ಯೂರಿಟಿಯಾಗಿ ತಮ್ಮ ಕಾರನ್ನು ಒಪ್ಪಿಸಿದ್ದರು.
ವಾಯಿದೆಯಂತೆ 6 ಲಕ್ಷ ಹಣ ಹೊಂದಿಸಲು ಸಾಧ್ಯವಾಗದೆ 1.50 ಲಕ್ಷ ಹಣವನ್ನು ಅರುಣ್ ನೀಡಲು ಮುಂದಾದಾಗ ಬೆದರಿಕೆ ಹಾಕಲಾಗಿದೆ ಎಂದು ದಿನೇಶ್ ವಿರುದ್ಧ ಮೃತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.