ಬೆಳಗಾವಿ:ಜೂ. 4ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತ ಎಣಿಕೆಗೆ ಉತ್ತಮವಾಗಿ ತಯಾರಿ ಮಾಡಿಕೊಂಡಿದ್ದೇವೆ. ಯಾವುದೇ ಗೊಂದಲ ಇಲ್ಲದೇ ಪಾರದರ್ಶಕವಾಗಿ ಮತ ಎಣಿಕೆ ಪೂರ್ಣಗೊಳಿಸಿ ಫಲಿತಾಂಶವನ್ನು ನೀಡುತ್ತೇವೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಮತ ಎಣಿಕೆ ನಡೆಯಲಿರುವ ಬೆಳಗಾವಿ ನಗರದ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. "8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಮೇ 7ರಂದು ನಡೆದ ಚುನಾವಣೆಯಲ್ಲಿ 13,75,283 ಮತದಾರರು ಮತ ಚಲಾಯಿಸಿದ್ದು, ಶೇ.71.49 ಮತದಾನ ದಾಖಲಾಗಿತ್ತು. ಒಟ್ಟು 19,23,788 ಮತಗಳು. ಇನ್ನು ಈವರೆಗೆ 11,148 ಪೋಸ್ಟಲ್ ಬ್ಯಾಲೆಟ್ ಮತಗಳು ಬಂದಿದ್ದು, ಬೆಳಿಗ್ಗೆ 8 ಗಂಟೆವರೆಗೆ ಬಂದ ಪೋಸ್ಟಲ್ ಬ್ಯಾಲೆಟ್ ಮತಗಳನ್ನು ಪರಿಗಣಿಸಲಾಗುತ್ತದೆ. ಇನ್ನು 300 ಮತಗಳು ಹೆಚ್ಚಿಗೆ ಬರಬಹುದು".
"ಮತ ಏಣಿಕೆ ನಡೆಯಲಿರುವ ಜೂ.4ರಂದು ಬೆಳಗ್ಗೆ 6 ಗಂಟೆಗೆ ಮತಪೆಟ್ಟಿಗೆ ಇರುವ ಭದ್ರತಾ ಸ್ಟ್ರಾಂಗ್ ರೂಮ್ಗಳನ್ನು ಅಭ್ಯರ್ಥಿಗಳು, ಕೌಂಟಿಂಗ್ ಏಜೆಂಟ್ಗಳು, ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ತೆರೆಯಲಾಗುವುದು. ಒಟ್ಟು 17 ಕೊಠಡಿಗಳಿದ್ದು, 1 ಕೊಠಡಿ ಪೋಸ್ಟಲ್ ಬ್ಯಾಲೆಟ್ ಮತಗಳಿಗೆ ಮೀಸಲಿಡಲಾಗಿದೆ. 8 ಗಂಟೆಯಿಂದ ಮತ ಎಣಿಕೆ ಆರಂಭವಾಗುತ್ತದೆ. ಅಂದು ಜಿಲ್ಲಾದ್ಯಂತ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಇರಲಿದ್ದು, ಕೇಂದ್ರದಲ್ಲಿ ಮೊಬೈಲ್, ತಂಬಾಕು, ಬೀಡಿ ಕೂಡ ನಿಷಿದ್ಧಗೊಳಿಸಿದ್ದೇವೆ".
"ಇವಿಎಂ ಮತಗಳ ಣಿಕೆಗೆ 8 ಕೊಠಡಿ ಸಿದ್ಧಪಡಿಸಿಕೊಂಡಿದ್ದೇವೆ. ಪೋಸ್ಟಲ್ ಬ್ಯಾಲೆಟ್ ಮತಗಳ ಏಣಿಕೆಗೆ ಎರಡು ಹೆಚ್ಚುವರಿ ರೂಮ್ ಮಾಡಿಕೊಂಡಿದ್ದೇವೆ. ಚುನಾವಣೆ ಆಯೋಗದಿಂದ 18 ಟೇಬಲ್ ಹಾಕಲು ಅನುಮತಿ ಪಡೆದಿದ್ದೇವೆ. 14 ಟೇಬಲ್ಗಳಲ್ಲಿ ಮತ ಎಣಿಕೆಗೆ ಅವಕಾಶವಿದೆ. 14+1 ಏಜೆಂಟ್ಗಳಿಗೆ ಅವಕಾಶ ನೀಡಲಾಗುತ್ತದೆ. ಪೋಸ್ಟಲ್ ಬ್ಯಾಲೆಟ್ 18 ಟೇಬಲ್ಗಳಿಗೆ 18 ಕೌಂಟಿಂಗ್ ಏಜೆಂಟ್ಗಳಿಗೆ ಅವಕಾಶ ನೀಡಲಾಗಿದೆ. ಒಟ್ಟು 552 ಸಿಬ್ಬಂದಿಗಳನ್ನು ಮತ ಎಣಿಕೆಗೆ ನಿಯೋಜಿಸಲಾಗಿದ್ದು, 30 ಏರ್.ಓಗಳು ಇರುತ್ತಾರೆ".