ಹಾವೇರಿ:ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲು ಮಂಗಳಮುಖಿಯರಿಗೆ ಅವಕಾಶ ನೀಡಿತ್ತು. ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ ಅಕ್ಕ ಕೆಫೆಗೆ ಗ್ರಾಹಕರು ಹೇಗೆ ಸ್ಪಂಧಿಸುತ್ತಾರೆ ಎಂಬ ಅತಂಕ ಜಿಲ್ಲಾಡಳಿತ ಮತ್ತು ಮಂಗಳಮುಖಿಯರಿಗಿತ್ತು. ಆದರೆ ಈಗ ಆ ಆತಂಕ ಮಾಯವಾಗಿದೆ. ಮಂಗಳಮುಖಿಯರು ನಿರ್ವಹಣೆ ಮಾಡುತ್ತಿರುವ ಅಕ್ಕ ಕೆಫೆಗೆ ನಿರೀಕ್ಷೆಗೆ ಮೀರಿ ಗ್ರಾಹಕರು ಆಗಮಿಸುತ್ತಿದ್ದಾರೆ.
ಗ್ರಾಹಕರ ಸ್ಪಂದನೆಗೆ ಮಂಗಳಮುಖಿಯರೇ ಮೂಕವಿಸ್ಮಿತ:ಮಂಗಳಮುಖಿಯರು ನಿರ್ವಹಣೆ ಮಾಡುವ ಈ ಕೆಫೆಯಲ್ಲಿ ರುಚಿ ಮತ್ತು ಶುಚಿಗೆ ಮೊದಲ ಆದ್ಯತೆ ನೀಡಲಾಗಿದೆ. ಯಾವುದೇ ಕೃತಕ ಬಣ್ಣ ರುಚಿಕಾರಕ ರಸಾಯನಿಕಗಳನ್ನು ಬಳಸದೇ ಇಲ್ಲಿ ಆಹಾರ ತಯಾರಿಸಲಾಗುತ್ತಿದೆ. ಜಿಲ್ಲಾಡಳಿತ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗೆ ಬರುವ ದೂರ ದೂರದ ಗ್ರಾಮಗಳ ಜನರು ಊಟದ ಸಮಯದಲ್ಲಿ ಇಲ್ಲಿಗೆ ಬಂದು ಭೋಜನ ಸವಿಯುತ್ತಾರೆ. ಇಲ್ಲಿ 70 ರೂಪಾಯಿಗೆ ಫುಲ್ ಮೀಲ್ಸ್ ನೀಡಲಾಗುತ್ತಿದೆ. ಇದರಿಂದ ಬಡವರು ಜಿಲ್ಲಾಡಳಿತದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಸರ್ಕಾರಿ ನೌಕರರು ಈ ಅಕ್ಕ ಕೆಫೆಯಲ್ಲಿ ಆಹಾರ ಸೇವಿಸುತ್ತಾರೆ. ಇದಲ್ಲದೇ ಪಾರ್ಸಲ್ ಸೇವೆ ಸಹ ಇದ್ದು, ಪಾರ್ಸಲ್ ಕಟ್ಟಿಸಿಕೊಂಡು ಹೋಗುತ್ತಾರೆ. ಗ್ರಾಹಕರ ಈ ಸ್ಪಂದನೆಗೆ ಮಂಗಳಮುಖಿಯರೇ ಮೂಕವಿಸ್ಮಿತರಾಗಿದ್ದಾರೆ.
ಮೊದ ಮೊದಲು ಭಯವಿತ್ತು:ಮೊದ ಮೊದಲು ಅಕ್ಕ ಕೆಫೆಗೆ ಬರುವ ಗ್ರಾಹಕರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ ಈಗ ಎಲ್ಲವೂ ಸುಲಭವಾಗಿದೆ. ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡ ಜಿಲ್ಲಾ ಪಂಚಾಯತ್ ಕಾರ್ಯಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಬರುವ ಗ್ರಾಹಕರು ಸಹ ಮಂಗಳಮುಖಿಯರು ತಯಾರಿಸುವ ಆಹಾರ ಪದಾರ್ಥಗಳ ರುಚಿಗೆ ಮನಸೋತಿದ್ದಾರೆ. ಇದರಿಂದ ತಮಗೆ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.