ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಏರ್ಪೋರ್ಟ್ ಉದ್ಯೋಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಕಾಜೋಲ್ ಶಿಯಾನಿ ಮೃತರು. ಘಟನೆಯಲ್ಲಿ ರೀತು ಪಾಟೀಲ ಎಂಬ ಯುವತಿ ಸೇರಿದಂತೆ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.
ಒಂದೇ ಕಾರಿನಲ್ಲಿ ಐದು ಜನ ಬೆಳಗಾವಿ ಏರ್ಪೋರ್ಟ್ ಉದ್ಯೋಗಿಗಳು ಪ್ರಯಾಣ ಬೆಳೆಸಿದ್ದರು. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾಜೋಲ್ ಶಿಯಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಲಕ ನಿಯಂತ್ರಣ ತಪ್ಪಿ ಟ್ರ್ಯಾಟರ್ನ ಹಿಂಬದಿಯ ನೀರಿನ ಟ್ಯಾಂಕರ್ ಪಲ್ಟಿ(ಚಿಕ್ಕಮಗಳೂರು): ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಿಂಬದಿಯ ನೀರಿನ ಟ್ಯಾಂಕರ್ ಪಲ್ಟಿಯಾದ ಘಟನೆ ಕಳಸದ ಕುದುರೆಮುಖ ರಸ್ತೆಯ ಆಶ್ರಮದ ಸಮೀಪ ನಡೆದಿದೆ. ಪಲ್ಟಿಯಾದ ನೀರಿನ ಟ್ಯಾಂಕರ್ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇಬ್ಬರು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಕುದುರೆಮುಖ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾದ ಬೈಕ್, ಸವಾರಿಗೆ ಗಂಭೀರ ಗಾಯ(ಕೋಲಾರ): ನಿಯಂತ್ರಣ ತಪ್ಪಿ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಬಂಗಾರಪೇಟೆಯ ಪಟ್ಟಣದ ಬೂದಿಕೋಟೆ ಮೇಲ್ಸೇತುವೆ ಮೇಲೆ ನಡೆದಿದೆ. ಘಟನೆಯಲ್ಲಿ ಬೂದಿಕೋಟೆಯ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಕಡೆಯಿಂದ ಬೈಕ್ ನಲ್ಲಿ ಗ್ರಾಮಕ್ಕೆ ಹಿಂತಿರುಗುವ ವೇಳೆ ಬೂದಿಕೋಟೆ ಮೇಲ್ಸೇತುವೆ ಮೇಲಿನ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೆ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಇನ್ನು ಬೈಕ್ ಡಿಕ್ಕಿಯ ದೃಶ್ಯ ಕಾರಿನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನಲ್ಲಿದ್ದ ಏರ್ ಬ್ಯಾಗ್ಸ್ ಓಪನ್ ಆಗಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ:ಸ್ಕೂಟರ್- ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು: ವಿಡಿಯೋದೊಂದಿಗೆ BMTC ಸ್ಪಷ್ಟನೆ