ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾದರು. ಸೋಮವಾರ ನಗರದ ಜಿಲ್ಲಾ ಹಾಲು ಒಕ್ಕೂಟದ ಸಭಾಗೃಹದಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಹಿಂದಿನ ಅಧ್ಯಕ್ಷ ವಿವೇಕರಾವ ಪಾಟೀಲ ಮತ್ತು ಒಕ್ಕೂಟದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ಸದಸ್ಯರಿಗೆ ಆಭಾರಿ. ಸರ್ಕಾರವು ಸಹಕಾರಿ ಇಲಾಖೆಯಲ್ಲಿ ತಿದ್ದುಪಡಿಯನ್ನು ತರಲು ಉತ್ಸುಕವಾಗಿದೆ. ಈಗಾಗಲೇ ರಾಜ್ಯ ಮಟ್ಟದ ಸಹಕಾರಿ ಮಹಾಮಂಡಳಿಗೆ ಹೋಗ ಬಯಸುವವರು ಮೊದಲಿಗೆ ಜಿಲ್ಲಾ ಒಕ್ಕೂಟಕ್ಕೆ ಅಧ್ಯಕ್ಷರಾಗಬೇಕು. ಅಧ್ಯಕ್ಷರಾದವರು ಮಹಾಮಂಡಳಿಗೆ ನಿರ್ದೇಶಕರಾಗಬೇಕೆನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಗೆ ವಿಧಾನ ಪರಿಷತ್ತಿನಲ್ಲಿ ಸೋಲಾಗಿದ್ದು, ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಸಹಕಾರಿ ಇಲಾಖೆಯ ಹೊಸ ನಿಯಮ ಜಾರಿಯಾಗುವುದರಿಂದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ನಾನು ಅಧ್ಯಕ್ಷ ಆಗಬೇಕಾಯಿತು ಎಂದರು.
ಹಿಂದಿನ ಅವಧಿಯ ಅಧ್ಯಕ್ಷರಾಗಿ ವಿವೇಕರಾವ್ ಪಾಟೀಲ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕೆಎಂಎಫ್ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಬೇಕಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಗೊಂದಲಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ವಿವೇಕರಾವ್ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಯಬಾಗ, ಗೋಕಾಕ, ಮೂಡಲಗಿ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಪೂರೈಸುತ್ತಿದ್ದಾರೆ. ಆದರೆ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ಅಥಣಿ ತಾಲೂಕಿನ ರೈತರು ಮಾತ್ರ ನೆರೆಯ ಮಹಾರಾಷ್ಟ್ರಕ್ಕೆ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಬೈಲಹೊಂಗಲ ರೈತರು ಕಡಿಮೆ ಪ್ರಮಾಣದಲ್ಲಿ ಹಾಲು ಪೂರೈಸುತ್ತಿದ್ದಾರೆ. ಇದಕ್ಕೆ ಕಾರಣ ರೈತರು ಹೈನುಗಾರಿಕೆಗೆ ಅಷ್ಟಾಗಿ ಒತ್ತು ಕೊಡುತ್ತಿಲ್ಲ. ನೀರಿನ ಸಮಸ್ಯೆಯನ್ನು ಮುಂದೆ ಮಾಡುತ್ತಿದ್ದಾರೆ ಎಂದರು.