ಬೆಂಗಳೂರು:''ದೇಶದ ಸಂವಿಧಾನ ರಕ್ಷಣೆ ಹಾಗೂ ಐಕ್ಯತೆಗೆ ನಾವು ಹೋರಾಟ ಮಾಡಬೇಕು'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು. 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ''76ನೇ ಗಣರಾಜ್ಯೋತ್ಸವ ಬಹಳ ಮಹತ್ವದ್ದಾಗಿದೆ. ಸಂವಿಧಾನ ರಕ್ಷಣೆ ಹಾಗೂ ಸಂವಿಧಾನದ ಪ್ರಕಾರವಾಗಿ ನಡೆದುಕೊಳ್ಳುವುದು ಅತಿ ಮುಖ್ಯ. ಆದರೆ ಈಗಿರುವ ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿದೆ. ಇದರಿಂದ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಸಿಗುವ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತಿದೆ'' ಎಂದರು.
''ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ಸಿಕ್ಕ ನಂತರ ನಮಗೆ ವಿಶೇಷವಾದ ಸ್ಥಾನಮಾನ ಸಿಕ್ಕಿದೆ. ಇದು ಅನೇಕರಿಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಮತ ಕೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಕೊಡುಗೆ. ಇವರುಗಳ ಕೊಡುಗೆಯಿಂದ ನಾವು ಈ ದೇಶವನ್ನು ಸ್ವಾತಂತ್ರ್ಯವಾಗಿ ಉಳಿಸಿ, ದೇಶದ ಐಕ್ಯತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ದುಃಖದ ವಿಚಾರ ಎಂದರೆ, ಅಮಿತ್ ಶಾರಂತಹ ದೇಶದ ಪ್ರಮುಖ ನಾಯಕರು ಸಂವಿಧಾನವನ್ನು ಹಿಯಾಳಿಸುತ್ತಿದ್ದಾರೆ. ಸಂವಿಧಾನ ರಚಿಸಿದವರ ಬಗ್ಗೆ ಟೀಕೆ ಮಾಡಿ ಅವರಿಗೆ ಅಗೌರವ ತೋರುತ್ತಿದ್ದಾರೆ'' ಎಂದು ತಿಳಿಸಿದರು.
ಅಮಿತ್ ಶಾ ವಿರುದ್ಧ ವಾಗ್ದಾಳಿ : ''ಪ್ರತಿಯೊಂದಕ್ಕೂ ಅಂಬೇಡ್ಕರ್ ಹೆಸರು ಜಪ ಮಾಡುತ್ತೀರಿ. ಅದರ ಬದಲು ದೇವರ ಹೆಸರು ಜಪಿಸಿದ್ದರೆ 7 ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು ಎಂದು ಸಂಸತ್ತಿನಲ್ಲಿ ಅಮಿತ್ ಶಾ ಅವರು ಹೇಳಿದ್ದಾರೆ. ಇವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲಿಲ್ಲ. ಮೋದಿ ಅವರು ತಮ್ಮ ಭಾಷಣದಲ್ಲಿ ದೇಶವನ್ನು ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ತರಲು ಶಕ್ತಿ ತುಂಬುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ದೇಶ 5ನೇ ಸ್ಥಾನದಿಂದ ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಯುಪಿಎ ಸರ್ಕಾರದ ಶ್ರಮದಿಂದ ದೇಶವನ್ನು ಆರ್ಥಿಕವಾಗಿ ನಾಲ್ಕನೇ ಸ್ಥಾನಕ್ಕೆ ತರಲಾಗಿತ್ತು. ಆದರೆ ಈಗಿನ ಸರ್ಕಾರಕ್ಕೆ ನಾಲ್ಕನೇ ಸ್ಥಾನಕ್ಕೆ ತರಲೂ ಸಾಧ್ಯವಾಗುತ್ತಿಲ್ಲ'' ಎಂದು ಖರ್ಗೆ ಟೀಕಿಸಿದರು.