ಕರ್ನಾಟಕ

karnataka

ETV Bharat / state

ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್ ವಿಚಾರ: ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ ಗೃಹ ಸಚಿವ ಪರಮೇಶ್ವರ್ - Darshan Case

ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ವರದಿ ಬೆನ್ನಲ್ಲೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ಸಚಿವ ಪರಮೇಶ್ವರ್, ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಅಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವು ಮಾಹಿತಿ ಹಂಚಿಕೊಂಡರು.

PARAMESHWAR VISITED CENTRAL JAIL
ಗೃಹ ಸಚಿವ ಡಾ. ಜಿ ಪರಮೇಶ್ವರ್‌ (ETV Bharat)

By ETV Bharat Karnataka Team

Published : Aug 26, 2024, 8:09 PM IST

ಗೃಹ ಸಚಿವ ಡಾ. ಜಿ ಪರಮೇಶ್ವರ್‌ (ETV Bharat)

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ಗೆ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಕೆಲ ಹೊತ್ತು ಪರಿಶೀಲನೆ ನಡೆಸಿದರು.

ಜೈಲು ಪರಿಶೀಲನೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಘಟನೆಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಘಟನೆ ಗೊತ್ತಾದ ತಕ್ಷಣ ಏಳು ಮಂದಿಯನ್ನು ಈಗಾಗಲೇ ಅಮಾನತು ಕೂಡ ಮಾಡಿದ್ದೇವೆ. ನಾನು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಘಟನೆಯ ಬಗ್ಗೆ ಪೂರ್ಣ ವಿವರ ನೀಡುವಂತೆ ಸೂಚನೆಯನ್ನು ನೀಡಲಾಗಿದೆ ಎಂದರು.

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಚೀಪ್ ಸಿ.ಎಸ್. ಶೇಶುಮೂರ್ತಿ ಹಾಗೂ ಸೂಪರಿಂಟೆಂಡೆಂಟ್ ಮಲ್ಲಿಕಾರ್ಜುನಸ್ವಾಮಿ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಕೆಳಗಿನ ಸಿಬ್ಬಂದಿ ಜೊತೆಗೆ ಮೇಲಿನ ಅಧಿಕಾರಿಗಳ ನಿರ್ಲಕ್ಷ್ಯ ಸಹ ಕಂಡುಬಂದಿದ್ದು, ಅವರನ್ನು ಸಹ ಅಮಾನತು ಮಾಡಲಾಗಿದೆ.

ದರ್ಶನ್​ಗೆ ಯಾರು ಸಿಗರೇಟ್​, ಟೀ, ಚೇರು ತಂದುಕೊಟ್ಟಿರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖಾ ಹಂತದ ಭಾಗವಾಗಿ ಸದ್ಯಕ್ಕೆ ಮೂರು ಎಫ್​ಐಆರ್​ ದಾಖಲು ಮಾಡಲಾಗಿದೆ. ಪ್ರಿಜನ್ ಆ್ಯಕ್ಟ್ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಮೂರು ದೂರುಗಳನ್ನು ನಮೂದಿಸಲಾಗಿದೆ. ಇವರ ಮೇಲೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿ ವಿಚಾರಣೆ ನಡೆಸಲಾಗುತ್ತಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ, ನಟ ದರ್ಶನ್ ಸಿಗರೇಟು ಸೇದುವ ಹಾಗೂ ಟೀ ಕಪ್ ಹಿಡಿದುಕೊಂಡಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ರೌಡಿಯೊಬ್ಬನ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ಕೂಡಾ ವೈರಲ್ ಆಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಮಾಡುವ ಯೋಚನೆ ಇದೆ: ಸಿಎಂ ಸಿದ್ದರಾಮಯ್ಯ - Darshan Photo Viral

ABOUT THE AUTHOR

...view details