ಕರ್ನಾಟಕ

karnataka

ETV Bharat / state

ಏರೋ ಇಂಡಿಯಾದಲ್ಲಿ ಧ್ರುವ್ -330 ಸುಧಾರಿತ ಲಘು ಹೆಲಿಕಾಪ್ಟರ್​​ ಸಾರಂಗ್ ತಂಡ ಭಾಗಿ ಬಹುತೇಕ ಅನುಮಾನ - AERO INDIA SHOW

ಯಲಹಂಕ ವಾಯು ನೆಲೆಯಲ್ಲಿ ಫೆ.10 ರಿಂದ 14ರ ವರೆಗೆ ನಡೆಯುವ ಏರೋ ಇಂಡಿಯಾ-2025 ಪ್ರದರ್ಶನದಲ್ಲಿ ಸಾರಂಗ್ ತಂಡ ಭಾಗಿಯಾಗುವುದು ಬಹುತೇಕ ಅನುಮಾನವಾಗಿದೆ.

ಏರೋ ಇಂಡಿಯಾ
ಏರೋ ಇಂಡಿಯಾ (ETV Bharat)

By ETV Bharat Karnataka Team

Published : Feb 8, 2025, 9:14 PM IST

ಬೆಂಗಳೂರು : ಎರಡು ವರ್ಷಕ್ಕೊಮೆ ರಾಜಧಾನಿಯಲ್ಲಿ ನಡೆಯುವ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದೆ. ಫೆ.10 ರಿಂದ 14ರ ವರೆಗೆ ನಡೆಯುವ ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ತಂಡ ಭಾಗಿಯಾಗುವುದು ಬಹುತೇಕ ಅನುಮಾನವಾಗಿದೆ.

ಈಗಾಗಲೇ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್, ಸರಕು ವಿಮಾನ, ಲಘು ತರಬೇತಿ ವಿಮಾನ, ಮಿಲಿಟರಿ ರಹಸ್ಯ ಕಾರ್ಯಾಚರಣೆ ವಿಮಾನಗಳು ತಾಲೀಮು ನಡೆಸುತ್ತಿವೆ. ಪ್ರತಿ ಬಾರಿಯಂತೆ ಈ ಆವೃತ್ತಿಯಲ್ಲಿ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಬಾನಂಗಳದಲ್ಲಿ ಕಂಗೊಳಿಸಲು ತಯಾರಿ ನಡೆಸುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್​ಎಎಲ್) ವತಿಯಿಂದ ಅಭಿವೃದ್ಧಿಪಡಿಸಿರುವ ಧ್ರುವ್ -330 ಸುಧಾರಿತ ಲಘು ಹೆಲಿಕಾಪ್ಟರ್ ಕಳೆದ ಜನವರಿ 5ರಂದು ನಡೆದಿದ್ದ ಅಪಘಾತ ಹಿನ್ನೆಲೆಯಲ್ಲಿ ಈ ಬಾರಿ ಏರ್ ಶೋ ನಲ್ಲಿ ಭಾಗಿಯಾಗುವ ಬಗ್ಗೆ ಖಚಿತಪಡಿಸದ ಕಾರಣ ಸಾರಂಗ್ ಪ್ರದರ್ಶನ ಅನಿಶ್ಚಿತವಾಗಿದೆ.

ಗುಜರಾತ್​ನ ವಡೋದರಾದಲ್ಲಿ ಕಳೆದ ಜನವರಿ 21ರಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ವಾಯುಪಡೆ ತಂಡಕ್ಕೆ ಅನುಮತಿ ದೊರಕದ ಕಾರಣ ಪ್ರದರ್ಶನ ನೀಡಿರಲಿಲ್ಲ. ಬದಲಾಗಿ ಸೂರ್ಯಕಿರಣ್ ತಂಡ ಭಾಗಿಯಾಗಿತ್ತು. ಏರೋ ಇಂಡಿಯಾದಲ್ಲಿ ಸಾರಂಗ್ ಭಾಗವಹಿಸುವಿಕೆ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ. ಈ ಬಗ್ಗೆ ಅಧಿಕೃತ ಅನುಮತಿ ದೊರೆತಲ್ಲಿ ತಂಡ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ.

ಸಾರಂಗ್ ತಂಡವು 2003ರಲ್ಲಿ ಸ್ಥಾಪನೆಯಾಗಿದ್ದು, 2004ರಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಏರೋಸ್ಪೇಸ್ ಶೋದಲ್ಲಿ ಮೊದಲ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಸಿತು. ಐದು ಹೆಲಿಕಾಪ್ಟರ್‌ಗಳ ಸಾರಂಗ್ ತಂಡ, ದೇಶ-ವಿದೇಶಗಳ 385ಕ್ಕೂ ಹೆಚ್ಚು ಸ್ಥಳಗಳಲ್ಲಿ 1,200ಕ್ಕೂ ಹೆಚ್ಚು ಪ್ರದರ್ಶನ ನೀಡಿತ್ತು.

ಕಳೆದ ಜನವರಿ 4ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಬೇಪೋರ್ ಅಂತಾರಾಷ್ಟ್ರೀಯ ಜಲ ಉತ್ಸವದಲ್ಲಿ ಸಾರಂಗ್ ತಂಡವು ಪ್ರದರ್ಶನ ನಡೆಸಿತ್ತು. ಜ.5ರಂದು ಗುಜರಾತ್​​ನ ಪೋರಬಂದರ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನೌಕನೆಲೆಯ ಸುಧಾರಿತ ಲಘು ವಿಮಾನ (ಎಎಲ್​ಹೆಚ್) ಎಂಕೆ 111 ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದರು. ಈ ದುರಂತದ ಕಾರಣ ಪತ್ತೆಗೆ ವಾಯುಪಡೆಯ ನಿರ್ವಹಣಾ ಕಮಾಂಡ್‌ನ ಮಾಜಿ ಮುಖ್ಯಸ್ಥ ಏರ್ ಮಾರ್ಷಲ್ ವಿಭಾಸ್ ಪಾಂಡೆ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಅಲ್ಲದೆ, ಹೆಚ್ಎಎಲ್ 330 ಧ್ರುವ್ ಹೆಲಿಕಾಪ್ಟರ್​ಗಳ ತಾತ್ಕಾಲಿಕ ಹಾರಾಟ ನಿಷೇಧಿಸಲಾಗಿತ್ತು. ತನಿಖೆ ಹಾಗೂ ಶಿಫಾರಸ್ಸು ವರದಿ ಸಲ್ಲಿಸುವವರೆಗೆ ಹಾರಾಟ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಅಧಿಕೃತ ಸೂಚನೆಗಾಗಿ ಕಾಯಲಾಗುತ್ತಿದೆ ಎಂದು ವಾಯುಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಏರೋ ಇಂಡಿಯಾ ಶೋ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ - ಬದಲಿ ಮಾರ್ಗ, ಪಾರ್ಕಿಂಗ್ ಸ್ಥಳದ ವಿವರ ಹೀಗಿದೆ

ABOUT THE AUTHOR

...view details