ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಮಾತ್ರ ಕಳೆದ 50 ವರ್ಷಗಳಲ್ಲಿ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ್ದಾರೆ. ಐದು ವರ್ಷಗಳ ನಂತರವೂ ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿದ್ದು, ಜನಪ್ರಿಯ ನಾಯಕರ ವಿರುದ್ಧ ರಾಜಕೀಯ ದುರುದ್ದೇಶದಿಂದ ಅನುಮತಿ ನೀಡಿದ್ದಾರೆ ಎಂದು ಹೈಕೋರ್ಟ್ನಲ್ಲಿ ಮುಖ್ಯಮಂತ್ರಿ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ನ್ಯಾಯಪೀಠಕ್ಕೆ ವಿವರಿಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ವಿವರಿಸಿದ ಅವರು, ''ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಬಾರದಿತ್ತು. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಸಂಬಂಧಿಕರು, ಅಧಿಕಾರಿಗಳು ಅಸೂಯೆಯಿಂದ ಏನಾದರೂ ಮಾಡಿರಬಹುದು. ಅಲ್ಲದೆ, ಪರಿಹಾರದ ನಿವೇಶನ ಕೊಟ್ಟಿರುವುದು ಮುಡಾವೇ ಹೊರತು ಸಿದ್ದರಾಮಯ್ಯ ಅಲ್ಲ. ಆದರೂ ಅದಕ್ಕೆಲ್ಲಾ ಮುಖ್ಯಮಂತ್ರಿಗಳನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ'' ಎಂದು ತಿಳಿಸಿದರು.
ರಾಜ್ಯಪಾಲರ ಆದೇಶವೇ ಕಾನೂನು ಬಾಹಿರ: ''ಜಮೀನು ಸ್ವಾಧೀನವಾದ ಬಳಿಕ ಪರಿಹಾರದ ನೋಟಿಸ್ ವಿಳಂಬವಾಗಿ ತಲುಪಿದೆ. ಮುಡಾ ಜಮೀನನ್ನು ಭೌತಿಕವಾಗಿ ಸ್ವಾಧೀನಕ್ಕೆ ಪಡೆದಿರಲಿಲ್ಲ. ನಂತರ ಸೆ. 48 ಅಡಿ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಮಹಜರು ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ಆದರೂ ರಾಜ್ಯಪಾಲರು ಮುಡಾ ಸ್ವಾಧೀನದಲ್ಲಿತ್ತು ಎಂದು ಹೇಳಿದ್ದಾರೆ. ಹೀಗಾಗಿ, ರಾಜ್ಯಪಾಲರ ಆದೇಶವೇ ಕಾನೂನು ಬಾಹಿರವಾಗಿದೆ'' ಎಂದು ರವಿವರ್ಮ ಕುಮಾರ್ ವಿವರಿಸಿದರು
''ರಾಜ್ಯಪಾಲರ ಆದೇಶದಲ್ಲಿ ಫೋರ್ಜರಿ ಸೇರಿದಂತೆ ಮತ್ತಿತರ 25 ಸೆಕ್ಷನ್‌ಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಫೋರ್ಜರಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಮುಡಾ ಬಡಾವಣೆ ನಕ್ಷೆಯಲ್ಲಿ ಮುಖ್ಯಮಂತ್ರಿಗಳ ಸಂಬಂಧಿಕರ ಜಮೀನು ಇರಲಿಲ್ಲ. ಹೀಗಾಗಿ, ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ವಿರೋಧಿಸುವ ಅಗತ್ಯವಿರಲಿಲ್ಲ. ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವೇನು ಎಂಬುದಕ್ಕೆ ಯಾರೂ ಉತ್ತರಿಸಿಲ್ಲ. ಜಮೀನು ಮುಡಾ ಸ್ವಾಧೀನದಲ್ಲಿತ್ತು ಎಂಬ ಭಾವನೆ ಆಧಾರದಲ್ಲಿ ರಾಜ್ಯಪಾಲರು ಆದೇಶಿಸಿದ್ದಾರೆ'' ಎಂದರು.
''ಟಿ.ಜೆ.ಅಬ್ರಹಾಂ ಮೊದಲು ನೀಡಿದ ದೂರಿನ ಮೇರೆಗೆ ಕಡತವನ್ನು ಸಿದ್ಧಪಡಿಸಲಾಗಿದೆ. ಬಳಿಕ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ಕಡತದಲ್ಲಿ ಅದರ ಉಲ್ಲೇಖವಿಲ್ಲ'' ಎಂದು ವಿವರಿಸಿದರು.