ಬೆಂಗಳೂರು:ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸರು ಕಿರುಕುಳ ನೀಡುತ್ತಿದ್ದು, ದಯವಿಟ್ಟು ನನ್ನನ್ನು ಕಾಪಾಡಿ ಎಂದು ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದ ಕೆಪಿಸಿಟಿಎಲ್‌ನ ಸಾಗರದ ವಿಭಾಗದ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರಸ್ವಾಮಿ ವಿರುದ್ಧ ಸರ್ಕಾರಿ ವಕೀಲರು ಗಂಭೀರ ಆರೋಪ ಮಾಡಿದ್ದಾರೆ.
ಶಾಂತಕುಮಾರ ಸ್ವಾಮೀಜಿ ಅವರು ಮಹಿಳೆಯೊಬ್ಬರಿಗೆ ಹಲವು ರೀತಿ ಕಿರುಕುಳ ನೀಡಿದ್ದಾರೆ. ಆ ಮಹಿಳೆ ದೂರು ನೀಡಿದ್ದು, ಅದರಲ್ಲಿ ಶಾಂತಕುಮಾರ ಸ್ವಾಮೀಜಿ ಆರೋಪಿಯಾಗಿದ್ದಾರೆ. ಅದರಿಂದಲೇ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂಬ ಪ್ರಕರಣ ಕುರಿತು ಮಾಹಿತಿ ಪಡೆಯಲು ಸೂಚಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಪ್ರಕರಣದ ಬಗ್ಗೆ ವಿವರಿಸಿದರು. ಅಲ್ಲದೆ, ಪ್ರಕರಣ ಕುರಿತು ಪೊಲೀಸರಿಂದ ಪಡೆದುಕೊಂಡ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಿದರು.
ಈ ಅಂಶ ಪರಿಗಣಿಸಿದ ನ್ಯಾಯಪೀಠ, ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನೀವೇ ಹಿಂಪಡೆದುಕೊಂಡಿದ್ದೀರಿ. ಈ ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣ ಇಲ್ಲ. ಇದರಿಂದ ನ್ಯಾಯಾಲಯವು ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ. ನಿಮ್ಮ ವಿರುದ್ಧದ ಪ್ರಕರಣವನ್ನು ಪ್ರಶ್ನಿಸಿ ನೀವು ಹೈಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿ. ಅದರಲ್ಲಿ ನಿಮ್ಮ ಎಲ್ಲಾ ಅಳಲು ವಿವರಿಸಿ. ಅದನ್ನು ನ್ಯಾಯಾಲಯ ಪರಿಗಣಿಸಿ ವಿಚಾರಿಸಲಿದೆ ಎಂದು ತಿಳಿಸಿತು.