ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಏರಿಕೆ; ಮೊದಲ ಸ್ಥಾನದಲ್ಲಿದೆ ಬೆಂಗಳೂರು! - Adolescent Pregnancy

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಈ ಕಳವಳಕಾರಿ ಅಂಶವಿದೆ.

By ETV Bharat Karnataka Team

Published : Jul 9, 2024, 11:45 AM IST

Updated : Jul 9, 2024, 12:22 PM IST

Increasing cases of underage pregnancy in Karnataka; Bengaluru is in the top
ಬಾಲ ಗರ್ಭಿಣಿ ಪ್ರಕರಣಗಳು ಏರಿಕೆ (ಫೋಟೋ ಕೃಪೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ)

ಬೆಂಗಳೂರು:ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಅಧಿಕವಾಗಿರುವುದು ಎಚ್ಚರಿಕೆಯ ಗಂಟೆ. ಬಾಲ್ಯ ವಿವಾಹದ ಪಿಡುಗನ್ನು ತೊಡೆದುಹಾಕುವಲ್ಲಿ ಎಷ್ಟೇ ಪ್ರಯತ್ನಿಸಿದರೂ, ನಿಯಂತ್ರಣ ಮಾತ್ರ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಹೀಗಾಗಿ, 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಗರ್ಭಿಣಿಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ.

ರಾಜ್ಯದಲ್ಲಿ ಜ.1, 2022ರಿಂದ ಮಾರ್ಚ್ 31, 2023ರವರೆಗೆ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ (RCH) ದತ್ತಾಂಶ ತಿಳಿಸುತ್ತದೆ. ಅಚ್ಚರಿ ಎಂಬಂತೆ, ಬೆಂಗಳೂರು‌ ನಗರವೇ ಅತೀ ಹೆಚ್ಚು ಬಾಲಗರ್ಭಿಣಿ ಪ್ರಕರಣಗಳನ್ನು ಹೊಂದಿದೆ. ನಗರದಲ್ಲಿ 1,334 ಬಾಲ ಗರ್ಭಿಣಿ ಪ್ರಕರಣ ಪತ್ತೆಯಾಗಿವೆ.

ಸುಶಿಕ್ಷಿತರೇ ಇರುವ ನಗರ ಪ್ರದೇಶವಾದ ರಾಜ್ಯ ರಾಜಧಾನಿಯೇ ಬಾಲ ಗರ್ಭಿಣಿ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ. ಉಳಿದಂತೆ, ಬೆಳಗಾವಿಯಲ್ಲಿ 986, ಮೈಸೂರು 943, ಚಿತ್ರದುರ್ಗ 806, ವಿಜಯಪುರ 769 ಬಾಲ ಗರ್ಭಿಣಿಯರ ಪ್ರಕರಣಗಳಿವೆ.

ಕಲಬುರ್ಗಿ ಜಿಲ್ಲೆಯಲ್ಲಿ 764, ತುಮಕೂರಿನಲ್ಲಿ 689, ಮಂಡ್ಯದಲ್ಲಿ 647, ಬಾಗಲಕೋಟೆಯಲ್ಲಿ 567, ವಿಜಯನಗರ 507, ರಾಯಚೂರಲ್ಲಿ 493, ಯಾದಗಿರಿಯಲ್ಲಿ 481, ಬಳ್ಳಾರಿಯಲ್ಲಿ 459, ದಾವಣಗೆರೆಯಲ್ಲಿ 457, ಬೀದರ್‌ನಲ್ಲಿ 412, ಕೋಲಾರದಲ್ಲಿ 396 ಮತ್ತು ಹಾಸನದಲ್ಲಿ 317 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂಬ ಅಂಕಿಅಂಶವನ್ನು ನೀಡಲಾಗಿದೆ.

ರಾಮನಗರದಲ್ಲಿ 267, ಚಿಕ್ಕಬಳ್ಳಾಪುರದಲ್ಲಿ 263, ಶಿವಮೊಗ್ಗದಲ್ಲಿ 247, ಹಾವೇರಿಯಲ್ಲಿ 246, ಚಿಕ್ಕಮಗಳೂರಲ್ಲಿ 242, ಕೊಪ್ಪಳದಲ್ಲಿ 228, ಬೆಂಗಳೂರು ಗ್ರಾಮಾಂತರದಲ್ಲಿ 216, ಚಾಮರಾಜನಗರದಲ್ಲಿ 180, ಧಾರವಾಡದಲ್ಲಿ 178, ಕೊಡಗುನಲ್ಲಿ 127 ಮತ್ತು ಗದಗ ಜಿಲ್ಲೆಯಲ್ಲಿ 105, ಉತ್ತರ ಕನ್ನಡದಲ್ಲಿ 71, ದಕ್ಷಿಣ ಕನ್ನಡದಲ್ಲಿ 48 ಹಾಗೂ ಉಡುಪಿ ಜಿಲ್ಲೆಯಲ್ಲಿ 32 ಬಾಲ ಗರ್ಭಿಣಿ ಪ್ರಕರಣಗಳಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂಥ ಪ್ರಕರಣಗಳು ಪತ್ತೆಯಾಗುತ್ತಿವೆ.

ಇದನ್ನೂ ಓದಿ:ದಾವಣಗೆರೆ: ಎರಡು ತಿಂಗಳಲ್ಲಿ ಬರೋಬ್ಬರಿ 25 ಬಾಲ್ಯ ವಿವಾಹ ತಡೆದ ಅಧಿಕಾರಿಗಳು - child marriages

ಕಾರಣವೇನು?:ವರದಿಯಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಅಧಿಕವಾಗಲು ಪ್ರಮುಖ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಅದರಂತೆ, ಕುಟುಂಬದ ಸದಸ್ಯರ ಒತ್ತಡ, ಏಕ ಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಂದ 2,920 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಶಾಲೆಯಿಂದ ಹೊರಗುಳಿಯುವುದು, ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ 716 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು (ಪ್ರೇಮ ಪ್ರಕರಣ)ಗಳಿಂದ 2033 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ತಂದೆ ಅಥವಾ ತಾಯಿ ಮಾನಸಿಕ ಅಸ್ವಸ್ಥತೆ, ವಿಧವೆ ತಾಯಿ, ಪೋಷಕರ ತೀವ್ರ ಅನಾರೋಗ್ಯ, ಕೊರೊನಾ ಕಾರಣದಿಂದ 847 ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳು ನಡೆದಿವೆ ಎಂದು ವರದಿ ಹೇಳಿದೆ.

ನಿಯಂತ್ರಣಕ್ಕೆ ಕ್ರಮಗಳೇನು?:ಎಲ್ಲಾ ಸಂಬಂಧಿತ ಇಲಾಖೆಗಳು ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕಣಗಳ ತಡೆಗಟ್ಟಲು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆಗೊಳಿಸಿ, ಪ್ರತಿ ತಿಂಗಳು RCH ದತ್ತಾಂಶದ ಪ್ರಕಾರ, ಬಾಲ್ಯವಿವಾಹ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ. ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬಾಲ್ಯವಿವಾಹ ಮೆಟ್ಟಿನಿಂತ ಬಾಲಕಿ: ಬಾಲಮಂದಿರದಲ್ಲಿ ಇದ್ದುಕೊಂಡೇ ಪಿಯುಸಿಯಲ್ಲಿ ಶೇ.94.16 ಅಂಕ ಗಳಿಕೆ - PU Student Achievement

Last Updated : Jul 9, 2024, 12:22 PM IST

ABOUT THE AUTHOR

...view details