ಕರ್ನಾಟಕ

karnataka

ETV Bharat / state

ಅಂಜಲಿ, ನೇಹಾ ಹಿರೇಮಠ ನಿವಾಸಕ್ಕೆ ಎಡಿಜಿಪಿ ಭೇಟಿ: ಯುವತಿಯರ ಹತ್ಯೆ ಬಗ್ಗೆ ಹೇಳಿದ್ದೇನು? - ADGP Meets Neha Parents - ADGP MEETS NEHA PARENTS

ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರು ನೇಹಾ ಹಾಗೂ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ನೇಹಾ ಹಿರೇಮಠ ನಿವಾಸಕ್ಕೆ ಎಡಿಜಿಪಿ ಹಿತೇಂದ್ರ ಭೇಟಿ
ನೇಹಾ ಹಿರೇಮಠ ನಿವಾಸಕ್ಕೆ ಎಡಿಜಿಪಿ ಹಿತೇಂದ್ರ ಭೇಟಿ (ETV Bharat)

By ETV Bharat Karnataka Team

Published : May 19, 2024, 7:28 PM IST

Updated : May 19, 2024, 9:39 PM IST

ನೇಹಾ ಹಿರೇಮಠ ನಿವಾಸಕ್ಕೆ ಎಡಿಜಿಪಿ ಭೇಟಿ (ETV Bharat)

ಹುಬ್ಬಳ್ಳಿ:ಇತ್ತೀಚಿಗೆ ಹತ್ಯೆಯಾದನೇಹಾ ಹಾಗೂ ಅಂಜಲಿ ನಿವಾಸಕ್ಕೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅವರಿಗೆ ಹು-ಧಾ ಪೊಲೀಸ್ ಕಮಿಷನರ್​ ರೇಣುಕಾ ಸುಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಥ್​ ನೀಡಿದರು.

ಹು-ಧಾ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಎಡಿಜಿಪಿ ಹಿತೇಂದ್ರ, ಹು-ಧಾ ಕಮಿಷನರೇಟ್​ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಹಲವಾರು ಘಟನೆಗಳು ನಡೆದಿವೆ. ಎಲೆಕ್ಷನ್ ಸಹ ಇತ್ತು, ಇದೇ ವೇಳೆ ಇಬ್ಬರು ಯುವತಿಯರ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳು ಬಂದಿದ್ದವು. ಹೀಗಾಗಿ ನಾನೇ ಬಂದು ಸಭೆ ಮಾಡಿದ್ದೇನೆ, ಸಮಗ್ರ ಮಾಹಿತಿ ಪಡೆದಿದ್ದೇನೆ. ಆದರೆ ಇಲಾಖೆಯ ಆಂತರಿಕ ವಿಚಾರ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಆದರೆ ಕ್ರೈಂ ಅಂಕಿ-ಅಂಶಗಳ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಪರಾಧಗಳ ಅಂಕಿ-ಅಂಶ ನೋಡಿದ್ರೆ ಹಿಂದಿಗಿಂತ ಈ ಸಲ ಕಡಿಮೆ ಇದೆ. ಆದರೆ ಹು-ಧಾ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಮೂಡಿದೆ. ಹೀಗಾಗಿ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಕೆಲ ಸೂಚನೆ ಕೊಟ್ಟಿದ್ದೇನೆ. ಇದರಂತೆ ಅಪರಾಧ ಪ್ರಕರಣ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಕೆಲಸ ಪೊಲೀಸರು ಮಾಡಲಿದ್ದಾರೆ ಎಂದರು.

ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ನಿರ್ಧಾರಗಳ ಬಗ್ಗೆ ನಾನು ಬಹಿರಂಗವಾಗಿ ಹೇಳುವುದಿಲ್ಲ. ಪೊಲೀಸರ ವಿರುದ್ಧ ಸಾರ್ವಜನಿಕರಿಂದ ಕೆಲ ದೂರುಗಳು ಬಂದಿದ್ದವು. ದೂರು ಬಂದಾಗ ಕೆಲ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಂಜಲಿ ಅಜ್ಜಿ ಮೊದಲೇ ದೂರು ಕೊಡಲು ಬಂದಿದ್ದರೆಂಬ ವಿಚಾರ ಬಂದಿತ್ತು. ಹೀಗಾಗಿ ಸಂಬಂಧಿಸಿದ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹು-ಧಾ ಅವಳಿ ನಗರದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದು, ಸಭೆಯ ಸಮಗ್ರವಾದ ವರದಿ ಗೃಹ ಸಚಿವರಿಗೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಹತ್ಯೆಯಾದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಕುಳಿತು ಚರ್ಚೆ ಮಾಡಿ ಬಳಿಕ ಅಂಜಲಿ ಪ್ರಕರಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ ಅವರು, ಅಂಜಲಿ ಪ್ರಕರಣದ ಆರೋಪಿಯ ಜೊತೆಗೆ ಕೆಳ ಹಂತದ ಸಿಬ್ಬಂದಿ ಸಂಪರ್ಕದಲ್ಲಿದ್ದರು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಕಿವಿಗೂ ಬಿದ್ದಿದೆ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಇಲಾಖೆಯ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ: ರಾಜ್ಯದಲ್ಲಿ 2021 -23ಕ್ಕೆ ಹೋಲಿಸಿದರೆ 2024 ಏಪ್ರಿಲ್​ ವರೆಗೆ ಹತ್ಯೆಗಳ ಸಂಖ್ಯೆ ಕಡಿಮೆಯಿದೆ. ಇಲ್ಲಿ ಇಬ್ಬರು ಯುವತಿಯರ ಹತ್ಯೆ ನಮಗೂ ಬೇಸರ ಉಂಟು ಮಾಡಿದೆ. ಒಂದರ ಮೇಲೊಂದು ಹತ್ಯೆಯಾದ ಹಿನ್ನೆಲೆಯಲ್ಲಿ ನಾನು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಗೃಹ ಸಚಿವರು ವರದಿ ಕೊಡಿ ಎಂದು ಹೇಳಿದ್ದಾರೆ. ನಾವು ವರದಿ ಕೊಡುತ್ತೇವೆ. ಈ ಪ್ರಕರಣಗಳ ಬಗ್ಗೆ ಪೊಲೀಸ್​ ಇಲಾಖೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇಲಾಖೆಯ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಪೊಲೀಸ್​ ಇಲಾಖೆಯಲ್ಲಿನ ಭ್ರಷ್ಟಾಚಾರದಿಂದ ಅಪರಾಧ ಹೆಚ್ಚಳ: ಶಾಸಕ ಅರವಿಂದ್​ ಬೆಲ್ಲದ್​ ಆರೋಪ - MLA Aravind bellad

Last Updated : May 19, 2024, 9:39 PM IST

ABOUT THE AUTHOR

...view details