ಉಳ್ಳಾಲ:ಕ್ರಿಕೆಟಿಗ ಕೆಎಲ್ ರಾಹುಲ್, ನಟಿ ಕತ್ರಿನಾ ಕೈಫ್ ಸೇರಿದಂತೆ ಬಾಲಿವುಡ್ನ ಸೆಲೆಬ್ರಿಟಿಗಳು ಭಾನುವಾರ ಇಲ್ಲಿ ನಡೆದ ಕುತ್ತಾರು ಕೊರಗಜ್ಜನ ಹರಕೆಯ ಕೋಲದಲ್ಲಿ ಭಾಗವಹಿಸಿದ್ದರು.
ನಟಿ ಕತ್ರಿನಾ ಕೈಫ್, ಅವರ ಪತಿ ವಿಕ್ಕಿ ಕೌಶಲ್, ನಟ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ .ರಾಹುಲ್, ಮ್ಯಾಟ್ರಿಕ್ಸ್ ಎಂಟರ್ಟೈನ್ಮೆಂಟ್ನ ರೇಷ್ಮಾ ಶೆಟ್ಟಿ ಹಾಗೂ ವಿ.ಎಮ್ ಕಾಮತ್ ಸೇರಿದಂತೆ ಒಟ್ಟು 9 ಮಂದಿಯ ಹೆಸರನ್ನು ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ಇಂದು ನಡೆದ ಕೋಲದಲ್ಲಿ ವಿಕ್ಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಭಾಗಿಯಾಗಿದ್ದರು.
ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್.ರಾಹುಲ್ (ETV Bharat) ಕತ್ರಿನಾ, ರೇಷ್ಮಾ ಶೆಟ್ಟಿ, ಆಥಿಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಕುಳಿತಿದ್ದರೆ, ಕ್ರಿಕೆಟಿಗ ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು. ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಗಣ್ಯರು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟೆಯ ಕಚೇರಿ ಸಿಬ್ಬಂದಿಗೆ ಮನವಿ ಮಾಡಿದ್ದರು. ಅಲ್ಲದೇ ಸ್ಥಳದಲ್ಲಿ ಫೋಟೊ ತೆಗೆಯದಂತೆ ವಿನಂತಿ ಮಾಡಿದ್ದರು. ಚಿತ್ರ ತೆಗೆದವರನ್ನು ಡಿಲಿಟ್ ಮಾಡುವಂತೆ ಕೋರಿದರು.
ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೆ ನಿಂತು ಕತ್ರಿನಾ ಕೈಫ್ ಸೇರಿದಂತೆ ಉಳಿದವರು ನೋಡಿ ಧನ್ಯತಾ ಭಾವ ಅನುಭವಿಸಿದರು.
ಇದನ್ನೂ ಓದಿ:ಮುಂಗಾರು ಮಳೆ: ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಮುಂದಿನ 48 ಗಂಟೆ ರೆಡ್ ಅಲರ್ಟ್ ಘೋಷಣೆ - Rain Forecast