ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು, ಯುವ ದಸರಾ- ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ನಟ ನಾಗಭೂಷಣ್ ಅವರು ಚಾಲನೆ ನೀಡಿದರು. ಸೋಮವಾರದಿಂದ ಮೂರು ದಿನಗಳ ಕಾಲ ದಸರಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ.
ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಾಗಭೂಷಣ್, ಕೊಳ್ಳೇಗಾಲ ತಾಲೂಕಿನ ಟಗರಪುರ ನಮ್ಮೂರು, ಪಚ್ವಪ್ಪ ಹೋಟೆಲ್ನಲ್ಲಿ ದೋಸೆ ತಿಂದು, ನವೋದಯ ಶಾಲೆಗೆ ಹೋಗಲು ಬಸ್ಗಾಗಿ ಕಾಯುತ್ತಿದ್ದೆ. ನಾನು ನಿಮ್ ಕಾಡಿನವನು, ಇಲ್ಲೇ ಪಿಡಿಒ ಆಗಿದ್ದೆ" ಎಂದು ಹೇಳಿದರು.
2009-10ರ ಬ್ಯಾಚ್ನ ಪಿಡಿಒ ಆಗಿದ್ದ ನಾಗಭೂಷಣ್ ತಮ್ಮ ಕೆಲಸವನ್ನು ನೆನೆದು, "ಆಗೆಲ್ಲ ಡಿಸಿ ಆಫೀಸ್ನಿಂದ ಮೀಟಿಂಗ್ಗೆ ಫೋನ್ ಮಾಡುತ್ತಿದ್ದರು. ಈಗ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಮೊದಲೆಲ್ಲ ಮೆಮೊ ಕೊಡುತ್ತಿದ್ದರು. ಈಗ ಇನ್ವಿಟೇಷನ್ ಕೊಡುತ್ತಿದ್ದಾರೆ. ನಮ್ಮ ಜಿಲ್ಲೆ ಶ್ರೀಮಂತ ಜಿಲ್ಲೆ, ನೈಸರ್ಗಿಕವಾಗಿ ಸಂಪತ್ತಿರುವ ಜಿಲ್ಲೆ. ಇವ ನಮ್ ಊರವಾ ಕಡ ಅಂದ್ರೆ ನನಗೆ ಖುಷಿ ಆಗುತ್ತದೆ. ನಮ್ಮ ಊರಿನ ಭಾಷೆಯನ್ನು ನಾವೇ ಮಾತನಾಡಬೇಕು- ನಾವೇ ಬೆಳೆಸಬೇಕು. ಅದೇ ರೀತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ನಾವೇ ತೆಗೆದು ಹಾಕಬೇಕು. ಕೀಳರಿಮೆ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣವನ್ನೇ ಅಸ್ತ್ರ ಮಾಡಿಕೊಳ್ಳಬೇಕು" ಎಂದು ಯುವಕರಿಗೆ ಸಲಹೆ ನೀಡಿದರು.
"ಚಾಮರಾಜನಗರ ರಾಯಭಾರಿಯಾಗಿದ್ದ ಅಪ್ಪು ಸರ್ನ ನೆನೆಸಿಕೊಳ್ಳುತ್ತೇನೆ. ಚಾಮರಾಜನಗರ ಎಂದರೆ ಅವರಿಗೆ ಬಹಳ ಪ್ರೀತಿ" ಎಂದು ಪುನೀತ್ ಅವರನ್ನು ನೆನೆದರು. "ವಿದ್ಯಾಪತಿ ಚಿತ್ರ ಸದ್ಯದಲ್ಲೇ ಬಿಡಗಡೆಯಾಗಲಿದ್ದು, ಈ ಚಿತ್ರದಲ್ಲಿ ನಿಮ್ಮನ್ನು ಚೆನ್ನಾಗಿ ನಗಿಸುತ್ತೇನೆ" ಎಂದರು.
40 ವರ್ಷಗಳ ಬಳಿಕ ಖಾಸಗಿ ದರ್ಬಾರ್: ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಜನನ ಮಂಟಪದಲ್ಲಿ ಆಯೋಜಿಸಿದ್ದ ಖಾಸಗಿ ದರ್ಬಾರ್ನಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 40 ವರ್ಷಗಳ ನಂತರ ಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ಸ್ವಾಮಿ ಹೆಸರಿನಲ್ಲಿ ಖಾಸಗಿ ದರ್ಬಾರ್ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಗೆ ಬಹುಪರಾಕ್ ಹೇಳಲಾಯಿತು.
ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯಂ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ವಿವಿಧ ಸಂಘಟನೆಗಳ ಮುಖಂಡರು ಸ್ವಾಮಿಗೆ ನಮಿಸಿದರು. ಗಣ್ಯರ ಹೆಸರಿನಲ್ಲಿ ಬಹುಪರಾಕ್ ಹೇಳಲಾಯಿತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಬ್ ಇನ್ಸ್ಪೆಕ್ಟರ್ ಬಿ.ಎಂ. ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಹಳಷ್ಟು ವರ್ಷಗಳ ಬಳಿಕ ನಡೆದ ಈ ವಿಶೇಷ ಖಾಸಗಿ ದರ್ಬಾರ್ ಅನ್ನು ಸಾಕಷ್ಟು ಜನರು ಕಣ್ತುಂಬಿಕೊಂಡರು.