ಮಂಡ್ಯ:ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಏಪ್ರಿಲ್ 2ರಂದು ಆಪರೇಷನ್ ಇತ್ತು. ಆದರೆ, ಅಮ್ಮನಿಗೆ ಡೇಟ್ ಕೊಟ್ಟುಬಿಟ್ಟಿದ್ದೇನೆ. ಅದು ಮುಗಿಸಿ ಬರ್ತಿನಿ ಅಂತ ಡಾಕ್ಟರ್ಗೆ ಹೇಳಿ ಮಂಡ್ಯಕ್ಕೆ ಬಂದಿದ್ದೇನೆ. ಇವತ್ತು ರಾತ್ರಿ ಆಸ್ಪತ್ರೆಗೆ ದಾಖಲಾಗಿ, ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ. ಅದಕ್ಕೆ ದಯವಿಟ್ಟು ನಾನು ಹೋಗಬೇಕಾದರೆ, ಸ್ವಲ್ಪ ಜಾಗ ಮಾಡಿಕೊಡಿ, ಕೈ ಎಳೆಯಬೇಡಿ ಎಂದು ಬೇಡಿಕೊಳ್ಳುತ್ತೇನೆ ಎಂದು ನಟ ದರ್ಶನ್ ಕೋರಿದರು.
ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಇಂದು ನಡೆದ ಸುಮಲತಾ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಮಾತನಾಡುವುದಿಲ್ಲ. ಆದರೂ ಒಂದೇ ಮಾತಿನಲ್ಲಿ ಮುಗಿಸುತ್ತೇನೆ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ನಾನು ಅವರ ಹಿಂದೆ ನಿಂತೇ ಇರ್ತೀನಿ. ಯಾಕೆಂದರೆ, ಮನೆ ಮಕ್ಕಳು ಎಂದಾಗ, ಮನೆ ಮಕ್ಕಳ ಥರವೇ ಇರಬೇಕು. ತಾಯಿ ಯಾವತ್ತಿದ್ರೂ ತಾಯಿನೇ. ಸಾಯೋವರೆಗೂ ತಾಯಿನೇ. ಅಮ್ಮ ಕಣ್ಣು ಮುಚ್ಚಿಕೊಂಡು ಹಾಳು ಬಾವಿಗೆ ಬೀಳು ಅಂದ್ರು ಬೀಳುವುದಕ್ಕೂ ನಾನು ರೆಡಿ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ನನ್ನ ತಮ್ಮ ಅಭಿಷೇಕ್ ಬದ್ಧರಾಗಿರುತ್ತೇವೆ. ಎಲ್ಲ ನನ್ನ ಆತ್ಮೀಯ ಸ್ನೇಹಿತರು, ಸೆಲೆಬ್ರಿಟಿಗಳು ನನಗೆ ಪ್ರೀತಿ ತೋರಿಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು. ನಾವು ಎಂದಿಗೂ ಮಂಡ್ಯ ಜನರ ಜೊತೆಗೇ ಇರುತ್ತೇವೆ ಎಂದರು.
ಅಭಿಷೇಕ್ ಅಂಬರೀಶ್ ಮಾತನಾಡಿ, ನನಗೆ ಹಲವು ಯೋಚನೆ ಇತ್ತು ಏನು ಮಾತಾಡೋದು ಅಂತಾ. ಐದು ವರ್ಷದ ಹಿಂದೆ ಇದೇ ಕಾಳಿಕಾಂಬ ದೇವಸ್ಥಾನದಿಂದ ಸ್ವಾಭಿಮಾನದ ಹೋರಾಟ ಪ್ರಾರಂಭ ಆಯಿತು. ಅಂಬರೀಶ್ ಅಣ್ಣನ ಅಭಿಮಾನದಿಂದ ಇದೆಲ್ಲವೂ ಸಾಧ್ಯವಾಗಿದೆ. ಮಂಡ್ಯದಲ್ಲಿ ಅಂಬರೀಶ್ ಅಣ್ಣಗೆ ಪ್ರೀತಿ ಜಾಸ್ತಿ. ಅಂಬರೀಶ್ ಅಣ್ಣನ ಮಗನಾಗಿ ಹೇಳೋದು. ಚುನಾವಣೆ ಬರ್ತಾವೇ ಹೋಗ್ತಾವೇ. ಉಳಿಯೋದು ನಮ್ಮ ನಿಮ್ಮ ಸಂಬಂಧ, ಪ್ರೀತಿ ವಿಶ್ವಾಸ. ನನ್ನ ಗುರುತಿಸೋದು ಅಂಬರೀಷ್ ಅಣ್ಣನ ಮಗ ಎಂದು, ಮಂಡ್ಯದ ಗಂಡಿನ ಮಗ ಎಂದು ಗುರುತಿಸುತ್ತಾರೆ. ಏನೇ ಆದರೂ ಇದನ್ನು ಕಿತ್ತುಕೊಳ್ಳೋಕೆ ಆಗಲ್ಲ. ದೇವರ ಮೇಲೆ ಆಣೆ ಮಾಡಿದ್ದೇನೆ ಮಂಡ್ಯ ಬಿಟ್ಟು ಹೋಗಲ್ಲ. ನಾನು ನಮ್ಮ ತಾಯಿ ಮಂಡ್ಯದ ಜೊತೆಯೇ ಇರ್ತೀವಿ ಎಂದು ಹೇಳಿದರು.