ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 13 ಜನ ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಎಂಬ ಕಾರಣಕ್ಕಾಗಿ ಎಚ್ಚರಿಕೆ ನೀಡುವ ಉದ್ದೇಶದಿಂದ ಕರೆಸಿಕೊಂಡು ರೇಣುಕಾಸ್ವಾಮಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ದರ್ಶನ್, ಪವನ್, ವಿನಯ್, ಪ್ರದೋಶ್, ನಂದೀಶ್, ದೀಪಕ್, ಲಕ್ಷ್ಮಣ್, ನಾಗರಾಜು, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ಹಾಗೂ ರಾಘವೇಂದ್ರ ಎಂಬ ಆರೋಪಿಗಳನ್ನು ಇಂದು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದರು.
ಬಂಧನದ ಬಳಿಕ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಮೊದಲು, ''ಪೊಲೀಸರು ಎಷ್ಟು ಗಂಟೆಗೆ ಬಂಧಿಸಿದರು? ಎಂಬ ನ್ಯಾಯಾಧೀಶರ ಪ್ರಶ್ನೆಗೆ, ''ಮಧ್ಯಾಹ್ನ 3 ಗಂಟೆಗೆ ಬಂಧಿಸಿದ್ದಾರೆ ಎಂದು ದರ್ಶನ್ ಹಾಗೂ ಪವಿತ್ರಾ ಗೌಡ ಉತ್ತರಿಸಿದರು. ನಂತರ ವಾದ ಆರಂಭಿಸಿದ ಸರ್ಕಾರದ ಪರ ವಕೀಲರು ಪ್ರಕರಣದಲ್ಲಿ ಕೂಡಿ ಹಾಕಿ ಹತ್ಯೆಗೈಯಲಾಗಿದ್ದು, ಕೃತ್ಯ ನಡೆದ ಸ್ಥಳ ಮಹಜರು ಮಾಡಬೇಕಿದೆ. ಆರೋಪಿಗಳ ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ ಆಯುಧ ಜಪ್ತಿ ಮಾಡಬೇಕಿದೆ. ಹೆಚ್ಚಿನ ವಿಚಾರಣೆಯ ಅಗತ್ಯತೆ ಇರುವುದರಿಂದ 14 ದಿನಗಳ ಕಾಲ ಆರೋಪಿತರನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು.