ಮಂಗಳೂರು: ಒಬ್ಬರು ಒಮ್ಮೆ ಹೇಳಿದ ವಿಷಯವನ್ನು ಪುನಾರವರ್ತಿಸುವುದೇ ಬಹಳ ಕಷ್ಟದ ಕೆಲಸ. ಆದರೆ ಇಲ್ಲೊಬ್ಬ ಬಾಲಕ 16 ಮಂದಿ ಹೇಳಿದ ವಿಷಯಗಳನ್ನು ನೆನಪಿಟ್ಟು ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರಿ ದಾಖಲೆ ಬರೆದಿದ್ದಾನೆ.
ಹದಿನಾರು ಮಂದಿ ಕೊಟ್ಟ 16 ವಿಷಯಗಳನ್ನು ಏಕಕಾಲಕ್ಕೆ ನೋಡಿ, ಕೇಳಿ, ಗಮನಿಸಿ, ಸ್ಮರಣಶಕ್ತಿಯೊಳಗೆ ದಾಖಲಿಸಿಕೊಂಡು ಪ್ರದರ್ಶನ ನೀಡುವ 'ಷೋಡಶಾವಧಾನ'ದ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನ್ವೇಶ್ ಅಂಬೆಕಲ್ಲು 'ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾನೆ. ನೆನಪಿನ ಹತ್ತು ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಸ್ವರೂಪ ಶಿಕ್ಷಣದ ಮೂಲಕ ಪರಿಚಯಿಸುವ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮಾರ್ಗದರ್ಶನದಲ್ಲಿ ಈ ಬಾಲಕ ದಾಖಲೆ ನಿರ್ಮಿಸಿದ್ದಾನೆ.
ಪುಸ್ತಕಗಳ ಹೆಸರುಗಳು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರುಗಳು, ಹಾಡುಗಳ ಹೆಸರುಗಳು, ಘಂಟೆ ಶಬ್ದಗಳು, ಕ್ರಿಯೇಟಿವ್ ಆರ್ಟ್ ಜೊತೆಗೆ ಎರಡು ಕೈಗಳಿಗೂ, ಯೋಚನೆಗಳಿಗೂ ನಿರಂತರ ಕೆಲಸ, ಹೀಗೆ ಇನ್ನೂ ಹಲವು ವಿಚಾರಗಳ ಜೊತೆಗೆ ರೂಬಿಕ್ಸ್ ಕ್ಯೂಬ್ ಪರಿಹರಿಸಿಕೊಂಡು ಕಾಳುಗಳನ್ನು ಎಣಿಸುತ್ತಾ, ಮಧ್ಯೆ ಮಧ್ಯೆ ಪ್ರವೇಶ ಮಾಡಿ ಕಿರಿಕಿರಿ ಮಾಡುವ ಅಧಿಕ ಪ್ರಸಂಗಿಯನ್ನೂ ಸಹಿಸಿಕೊಂಡು 16 ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಅದ್ಭುತ ಸಾಧನೆಯ ಪ್ರದರ್ಶನ ಮಾಡಿ ದಾಖಲೆ ಬರೆದಿದ್ದಾನೆ.
ಉದಯೋನ್ಮುಖ ಪ್ರತಿಭೆ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 1ರಿಂದ 7ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿರುವ ಅನ್ವೇಶ್ ಪ್ರಸ್ತುತ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಪಠ್ಯಪುಸ್ತಕಗಳ ಕಲಿಕೆಯೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಅನ್ವೇಶ್, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ ಬೀಟ್‌ಬಾಕ್ಸ್, ನೆನಪು ಶಕ್ತಿಯ ಪ್ರತಿಭಾ ಪ್ರದರ್ಶನ ಹಾಗೂ ವಯೋಲಿನ್ ಅಭ್ಯಾಸ ನಡೆಸುತ್ತಿರುವ ಜೊತೆಗೆ ಚಿತ್ರಕಲೆಯಲ್ಲಿಯೂ ಗುರುತಿಸಿಕೊಂಡಿರುವ ಉದಯೋನ್ಮುಖ ಪ್ರತಿಭೆ.