ಬೆಂಗಳೂರು: ನಕಲಿ ಜಾಲತಾಣ ಸೃಷ್ಟಿಸಿ ವಿಮೆ ಕಂಪನಿಗಳ ಸೋಗಿನಲ್ಲಿ ಕರೆ ಮಾಡಿ ಇನ್ಶ್ಯೂರೆನ್ಸ್ ಮಾಡಿಸಿಕೊಡುವುದಾಗಿ ನಂಬಿಸಿ, ಆನ್ಲೈನ್ ಮೂಲಕ ಕೋಟ್ಯಂತರ ರೂಪಾಯಿ ಕಳುಹಿಸಿಕೊಂಡು ವಂಚಿಸುತ್ತಿದ್ದವನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಗಾಜಿಯಾಬಾದ್ ಮೂಲದ ಮನ್ವೀರ್ ಸಿಂಗ್ ಬಂಧಿತ ಆರೋಪಿ. ವಂಚನೆಗೊಳಗಾದ ಮುರಳೀಧರ್ ರಾವ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ಇನ್ಶ್ಯೂರೆನ್ಸ್ ಮಾಡಿಸಿಕೊಡುವುದಾಗಿ ನಂಬಿಸಿ ಇದುವರೆಗೂ 4.5 ಕೋಟಿ ರೂ.ವಂಚಿಸಿರುವುದು ಬೆಳಕಿಗೆ ಬಂದಿದೆ.
ಬಿಎಸ್ಸಿ ಪದವೀಧರನಾಗಿದ್ದ ಮನ್ ವೀರ್, ಕಳೆದ ನಾಲ್ಕು ವರ್ಷಗಳಿಂದ ವಂಚಿಸುವ ಕಾಯಕದಲ್ಲಿ ನಿರತನಾಗಿದ್ದ. ಪ್ರತಿಷ್ಠಿತ ಬ್ಯಾಂಕ್ಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಬರುವಂತೆ ಇನ್ಶ್ಯೂರೆನ್ಸ್ ಪ್ಲ್ಯಾನ್ ಇರುವುದಾಗಿ ಜಾಹೀರಾತು ಪ್ರಕಟಿಸಿದ್ದ. ಸಾರ್ವಜನಿಕರಿಗೆ ವಿಮೆ ಕಂಪನಿಗಳ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಪ್ರೀಮಿಯಂ ಬಾಂಡ್ ನೀಡಲಾಗುತ್ತಿದ್ದು, ಇದಕ್ಕೆ ಪಾಲಿಸಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದ. ಇದನ್ನ ನಂಬಿದ ಸಾರ್ವಜನಿಕರು ವಂಚಕನ ಅಣತಿಯಂತೆ ದಾಖಲಾತಿ ನೀಡಿ ಆನ್ಲೈನ್ ಮೂಲಕವೇ ಲಕ್ಷಾಂತರ ರೂಪಾಯಿ ಹಣ ಪಾವತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರದ ಉತ್ತರ ಪ್ರದೇಶದಲ್ಲಿ ಕುಳಿತುಕೊಂಡು ವಂಚನೆ ಕಾರ್ಯದಲ್ಲಿ ಮಗ್ನನಾಗಿದ್ದ ಆರೋಪಿಯು ದಾಖಲಾತಿ ಸಂಗ್ರಹಕ್ಕಾಗಿ ಕನ್ಸಲ್ಟೆನ್ಸಿಯೊಂದಕ್ಕೆ ಸಂಪರ್ಕಿಸಿ ಈ ಮೂಲಕ ಓರ್ವ ಉದ್ಯೋಗಿಯನ್ನ ನೇಮಿಸಿಕೊಂಡಿದ್ದ. ದೂರವಾಣಿ ಮೂಲಕವೇ ಗ್ರಾಹಕರ ವಿಳಾಸವನ್ನ ಉದ್ಯೋಗಿಗೆ ನೀಡಿ ಸಂಗ್ರಹಿಸಿದ ದಾಖಲಾತಿಯನ್ನ ಕೊರಿಯರ್ ಮಾಡಿಸಿಕೊಳ್ಳುತ್ತಿದ್ದ. ಎರಡು ವರ್ಷಗಳ ಹಿಂದೆ ಮುರಳೀಧರ್ ರಾವ್ ಎಂಬುವರಿಗೆ ಕರೆ ಮಾಡಿ, ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶ್ಯೂರೆನ್ಸ್ ನಿಂದ ಕರೆ ಮಾಡಿದ್ದೇವೆ. ನಿಮ್ಮ ಹೆಸರಿನಲ್ಲಿ ಪ್ರೀಮಿಯಂ ಬಾಂಡ್ ಬಂದಿದ್ದು, ಇದನ್ನ ಪಡೆಯಬೇಕಾದರೆ ವಿಮೆ ಮಾಡಿಸಿಕೊಳ್ಳಬೇಕು ಎಂದು ನಂಬಿಸಿದ್ದ. ಇದರಂತೆ ನಾಲ್ಕು ಲಕ್ಷ ಹಣವನ್ನ ಮುರಳೀಧರ್ ಅವರು ವಂಚಕನ ಖಾತೆಗೆ ಹಣ ಪಾವತಿಸಿದ್ದರು. ಖಾತೆಗೆ ಹಣ ವರ್ಗಾವಣೆಯಾದ ಬಳಿಕ ನಕಲಿ ಬಾಂಡ್ ನೀಡಿದ್ದ. ಈ ಮಧ್ಯೆ, ಬಾಂಡ್ ಪಡೆದವರು ಈತನಿಗೆ ಹಲವು ಕರೆ ಮಾಡಲು ಪ್ರಯತ್ನಿಸಿದರೂ ಫೋನ್ ಸ್ವಿಚ್ಡ್ ಆಫ್ ಬಂದಿದೆ. ಇದನ್ನು ಕಂಡು ತಾವು ವಂಚನೆಗೊಳಗಾಗಿರುವುದು ಅರಿತ ಮುರಳೀಧರ್ ಈ ಬಗ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 34 ವಂಚನೆ ಪ್ರಕರಣಗಳು ದಾಖಲಾಗಿರವುದು ತನಿಖೆ ವೇಳೆ ಕಂಡು ಬಂದಿದೆ. ಇದುವರೆಗೂ ಸುಮಾರು 4.5 ಕೋಟಿ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಇದನ್ನೂ ಓದಿ:ಥಾಯ್ಲೆಂಡ್ನಲ್ಲಿ ಭಾರತೀಯರಿಂದ ಸೈಬರ್ ವಂಚನೆ ಮಾಡಿಸುತ್ತಿದ್ದ ಜಾಲ ಬೆಳಕಿಗೆ; ಇಬ್ಬರ ಬಂಧನ - cyber fraud