ಬೆಂಗಳೂರು:ಉದ್ಯಮಿ ಕೃಷ್ಣ ಯಾದವ್ (55) ಹತ್ಯೆ ಪ್ರಕರಣದ ಆರೋಪಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಕುಮಾರ್ ಬಂಧಿತ ಆರೋಪಿ.
ಮಾರ್ಚ್ 12ರಂದು ಬಾಗಲೂರು ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಶವ ಪತ್ತೆಯಾಗಿತ್ತು. ಕಾರಿನಲ್ಲಿ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸೋಮವಾರ ರಾತ್ರಿ ಕೃಷ್ಣ ಯಾದವ್ ತಮ್ಮ ಪರಿಚಿತನಾಗಿರುವ ಸಂತೋಷನೊಂದಿಗೆ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಸಂತೋಷ್ನ ಹೆಂಡತಿ ಹಾಗೂ ಪುತ್ರನ ಬಗ್ಗೆ ಕೃಷ್ಣ ಯಾದವ್ ಅವಾಚ್ಯ ಪದ ಬಳಸಿ ನಿಂದಿಸಿದ್ದರಂತೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿದಾಗ ಕಾರಿನಲ್ಲಿದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡ ಸಂತೋಷ್ ಕೃಷ್ಣ ಯಾದವ್ಗೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದ, ಬಳಿಕ ಕಾರನ್ನು ಬಾಗಲೂರು ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಆಂಧ್ರ ಪ್ರದೇಶ ಮೂಲದ ಕೃಷ್ಣ ಯಾದವ್, ಕಳೆದ ಕೆಲ ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವರು ಸೋಮವಾರ ರಾತ್ರಿ ಕೆಲಸಕ್ಕೆ ಎಂದು ಮನೆಯಿಂದ ಹೊರಗೆ ಹೋದವರು ಮರಳಿರಲಿಲ್ಲ.
ಇದನ್ನೂ ಓದಿ:ಬೆಂಗಳೂರು: ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶವ ಪತ್ತೆ, ಕೊಲೆ ಶಂಕೆ