ಬೆಂಗಳೂರು : ಜನ್ಮ ನೀಡಿದ ಮಗುವನ್ನ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪದಡಿ ಮಗುವಿನ ತಾಯಿಯನ್ನ ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಮ್ಯ (35) ಬಂಧಿತೆ. ಈಕೆಯ ಮಗು ಪ್ರೀತಿಕಾಳನ್ನ ಹತ್ಯೆ ಮಾಡಿದ ಆರೋಪದ ಅಡಿ ಬಂಧಿಸಲಾಗಿದೆ. ಸುಬ್ರಮಣ್ಯಪುರದ ಮಂಜುನಾಥ ನಗರದಲ್ಲಿ ವಾಸವಾಗಿರುವ ಬಂಧಿತೆ ರಮ್ಯ ಗೃಹಿಣಿ. ಈಕೆಯ ಪತಿ ವೆಂಕಟೇಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ದೂರದ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈಕೆಯ ಅತ್ತೆ - ಮಾವ ವಾಜರಹಳ್ಳಿಯಲ್ಲಿ ವಾಸವಾಗಿದ್ದಾರೆ. 11 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಮುದ್ದಾದ ಅವಳಿ ಹೆಣ್ಣು ಮಗುವಾಗಿದ್ದು, ಇಬ್ಬರ ಮಗುವಿನ ಪೈಕಿ 3 ವರ್ಷ 10 ತಿಂಗಳ ಪ್ರೀತಿಕಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿತ್ತು. ಮತ್ತೊಂದು ಮಗು ಸಡೃಢವಾಗಿದ್ದು, ಶಾಲೆಗೆ ಹೋಗುತಿತ್ತು. ಹತ್ಯೆಯಾದ ಮಗು ಅನಾರೋಗ್ಯದಿಂದಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಇದರಿಂದ ರಮ್ಯ ಮನ ನೊಂದಿದ್ದರು.
ಮಾನಸಿಕವಾಗಿ ಸದೃಢವಾಗಿರದ ಮಗುವನ್ನ ಸಾಯಿಸಲು ನಿರ್ಧರಿಸಿ ಮಗುವನ್ನ ವೇಲಿನಿಂದ ಬಿಗಿದು ಸಾಯಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಬಂದು ಮಗುವನ್ನ ತೋರಿಸಿದ್ದರು. ಈ ಸಂಬಂಧ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಮ್ಯ ಅವರನ್ನು ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.