ಕರ್ನಾಟಕ

karnataka

ETV Bharat / state

ಸುಲಿಗೆ ಪ್ರಕರಣ: 8 ಕಿ.ಮೀ ಬೆನ್ನತ್ತಿ ಆರೋಪಿಗಳ ಸೆರೆ ಹಿಡಿದ ಪೊಲೀಸರು

ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಸುಮಾರು 8 ಕಿ.ಮೀ ಬೆನ್ನತ್ತಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

accused-arrested-regarding-extortion-in-davangere
ಸುಲಿಗೆ ಪ್ರಕರಣ (ETV Bharat)

By ETV Bharat Karnataka Team

Published : 5 hours ago

ದಾವಣಗೆರೆ: ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಎಂಟು ಕಿಲೋ ಮೀಟರ್ ಕ್ರಮಿಸಿ ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ನವೆಂಬರ್ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತರುಣ್, ಸಿಕಂದರ್, ಪ್ರಶಾಂತ್ ಬಂಧಿತರು. ದಾದಪೀರ್ ಮತ್ತು ಅಹ್ಮಮದ್ ಎಂಬವರು ಈ ಆರೋಪಿಗಳಿಂದ ಸುಲಿಗೆಗೆ ಒಳಗಾಗಿದ್ದರು.

ಪ್ರಕರಣದ ವಿವರ: ದಾವಣಗೆರೆ ತಾಲೂಕಿನ ಕಾಟೇಹಳ್ಳಿ ತಾಂಡದ ದಾದಾಪೀರ್ ಮತ್ತು ಅಹ್ಮಮದ್ ಎಂಬವರು ದಾವಣಗೆರೆಯಲ್ಲಿ ಕೆಲಸ ಮುಗಿಸಿ ವಾಪಸ್ ಊರಿಗೆ ತೆರಳುವಾಗ ಐಗೂರು ಗೊಲ್ಲರಹಟ್ಟಿ ಬಳಿ ಇರುವ ಜೀವನ್ ಡಾಬಾದಲ್ಲಿ ರಾತ್ರಿ ಊಟ ಮಾಡಿದ್ದಾರೆ. ಡಾಬಾದ ಬಳಿ ತಮ್ಮ ಬೈಕ್ ನಿಲ್ಲಿಸಿ ವಿಶ್ರಾಂತಿ ಮಾಡುತ್ತಿದ್ದಾಗ ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ಯುವಕರು ಹಲ್ಲೆ ಮಾಡಿ, ಹೆದರಿಸಿ ಅವರ ಬಳಿ ಇದ್ದ 2 ಬೆಳ್ಳಿಯ ಉಂಗುರ, ಜೇಬಿನಲ್ಲಿದ್ದ 2,000 ರೂ ನಗದು, ಮೊಬೈಲ್ ಫೋನ್​ಕಸಿದುಕೊಂಡು ಪರಾರಿಯಾಗಿದ್ದರು. ದಾದಾಪೀರ್ ಹಾಗೂ ಅಹ್ಮಮದ್ ಸ್ಥಳೀಯರ ಸಹಾಯದಿಂದ ಪೊಲೀಸರ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿವರ ಪಡೆದು ಠಾಣೆಗೆ ದೂರು ನೀಡುವಂತೆ ಹೇಳಿ ಕಳುಹಿಸಿದ್ದರು.

ಅನುಮಾನದ ಮೇರೆಗೆ ಪೊಲೀಸ್ ಸಿಬ್ಬಂದಿ, ಆರೋಪಿಗಳು ಹೋದ ಮಾರ್ಗದಲ್ಲೇ ತೆರಳಿದ್ದಾರೆ. ಈ ವೇಳೆ ಅನುಮಾನಾಸ್ಪದವಾಗಿ ಕಂಡ ಬೈಕ್​ ಅನ್ನು ಬೆನ್ನು ಹತ್ತಿದ್ದಾರೆ. ಆಗ ಆರೋಪಿಗಳು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಪೊಲೀಸರು ಸುಮಾರು 8 ಕಿ.ಮೀ ದೂರ ಆರೋಪಿಗಳ ಬೆನ್ನತ್ತಿದ್ದಾರೆ. ಕೊನೆಗೆ, ಆರ್​ಎಂಸಿ ಠಾಣಾ ವ್ಯಾಪ್ತಿಯ ಗಾಣಗಿತ್ತಿ ಮಾಯಮ್ಮ ದೇವಸ್ಥಾನದ ಸಮೀಪದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಲಿಗೆ ಮಾಡಿದ್ದ 1 ರಿಯಲ್ ಮಿ ಮೊಬೈಲ್, 2,000 ರೂ ನಗದು, 1 ಬೆಳ್ಳಿ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರು ಬಾಡಿಗೆಗೆ ಪಡೆದ ಯುವಕರ ಮೇಲೆ ಹಲ್ಲೆ, ಹಣ ಸುಲಿಗೆ: ಮೂವರ ಬಂಧನ

ABOUT THE AUTHOR

...view details