ಬೆಂಗಳೂರು:ಹಳೇ ಸ್ನೇಹಿತನನ್ನ ಭೇಟಿಯಾಗಲು ಕರೆಸಿಕೊಂಡು ಅಪಹರಿಸಿ ಸುಲಿಗೆಗೈದ ಆರೋಪದಲ್ಲಿ ಯುವತಿ ಸೇರಿ 7 ಜನರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಪೋತುಲ ಶಿವ ಎಂಬಾತನನ್ನ ಅಪಹರಿಸಿ ಸುಲಿಗೆಗೈದಿದ್ದ ಆರೋಪದಡಿ ಮೋನಿಕಾ, ಹರೀಶ್, ಹರಿಕೃಷ್ಣ, ರಾಜ್‍ಕುಮಾರ್, ನರೇಶ್, ಅಂಜನೀಲ್, ನರಸಿಂಹ ಎಂಬುವವರನ್ನ ಬಂಧಿಸಲಾಗಿದೆ.
ಏನಿದು ಪ್ರಕರಣ ?:ಈ ಬಗ್ಗೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರು ಮಾತನಾಡಿ, 'ಅಪಹರಣಕ್ಕೊಳಗಾಗಿದ್ದ ಶಿವ ಆಂಧ್ರಪ್ರದೇಶದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ದೂರದ ಸಂಬಂಧಿಯಾಗಿದ್ದ ಮೋನಿಕಾ 4 ವರ್ಷಗಳಿಂದ ಶಿವನಿಗೆ ಸ್ನೇಹಿತೆಯಾಗಿದ್ದಳು. ಭೇಟಿಯಾಗೋಣ ಬಾ ಎಂದಿದ್ದ ಮೋನಿಕಾ, ನವೆಂಬರ್ 17 ರಂದು ಶಿವನನ್ನ ಪೆನುಗೊಂಡಕ್ಕೆ ಕರೆಸಿದ್ದಳು. ಆದರೆ, ಶಿವನನ್ನ ಸುಲಿಗೆ ಮಾಡಲು ಸಜ್ಜಾಗಿದ್ದ ಆರೋಪಿಗಳು, ಆತನ ಮೇಲೆ ಹಲ್ಲೆಗೈದು ಪಾವಗಡಕ್ಕೆ ಕರೆದೊಯ್ದಿದ್ದರು' ಎಂದು ತಿಳಿಸಿದ್ದಾರೆ.
ಚಿನ್ನದ ಸರ ಸುಲಿಗೆ : 'ಬಳಿಕ 3 ದಿನಗಳ ಕಾಲ ಹೋಟೆಲ್‌ನಲ್ಲಿರಿಸಿಕೊಂಡು ಆತನ ಬಳಿಯಿದ್ದ ಚಿನ್ನದ ಸರ, ಬ್ರಾಸ್‌ಲೆಟ್ ಕಿತ್ತುಕೊಂಡು ಅದನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಂತರ ಆರೋಪಿಗಳು ಬೆದರಿಸಿದಾಗ ಸ್ನೇಹಿತರಿಗೆ ಕರೆ ಮಾಡಿದ್ದ ಶಿವ 5 ಲಕ್ಷ ರೂಗಳನ್ನ ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಆದರೆ ಹಣ ವಿತ್ ಡ್ರಾ ಮಾಡಲು ಅಗತ್ಯವಿರುವ ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನ ಶಿವ ಮನೆಯಲ್ಲಿಟ್ಟು ಬಂದಿದ್ದ. ಶಿವನಿಂದಲೇ ಆತನ ಮನೆಯವರಿಗೆ ಕರೆ ಮಾಡಿಸಿದ್ದ ಆರೋಪಿಗಳು ಬೆಂಗಳೂರಿನ ಮೆಜೆಸ್ಟಿಕ್‌ಗೆ ಆತನ ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನ ತರಿಸಿಕೊಂಡಿದ್ದರು' ಎಂದು ಹೇಳಿದ್ದಾರೆ.