ಬೆಂಗಳೂರು:ಅಕ್ಟೋಬರ್ 10ರಂದು ನಗರದ ವಿ.ವಿ.ಪುರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನ ಕಳ್ಳತನವಾಗಿತ್ತು. ಮನೆ ಮಾಲೀಕರು ಮಗಳ ಮನೆಗೆ ಕೇರಳಕ್ಕೆ ಹೋಗಿದ್ದಾಗ ಕೃತ್ಯ ಎಸಗಲಾಗಿತ್ತು.
ಉದ್ಯಮಿ ಮನೆಯಲ್ಲಿ ಈ ಹಿಂದೆ ಕಾರು ಚಾಲಕನಾಗಿದ್ದ ಕೇಶವ ಪಾಟೀಲ್ ಹಾಗೂ ಆತನ ಸ್ನೇಹಿತ ನಿತಿನ್ ಕಾಳೆ ಚಿನ್ನಾಭರಣ ಕದ್ದ ಆರೋಪಿಗಳು. ಕೇಶವ ಆರು ತಿಂಗಳ ಹಿಂದೆ ಡ್ರೈವಿಂಗ್ ಕೆಲಸ ಬಿಟ್ಟಿದ್ದ. ನಂತರ ಮಾಲೀಕರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನ ಇರುವುದಾಗಿ ಸ್ನೇಹಿತ ನಿತಿನ್ ಕಾಳೆ ಜೊತೆ ಚರ್ಚಿಸಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದರು.
ಇದಾದ ನಂತರ ನಿತಿನ್, ಕದ್ದ ಚಿನ್ನವನ್ನು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಮಾವ ಮೋಹನ್ ಮನೆಯಲ್ಲಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇಶವ್ ಪಾಟೀಲ್ ಮತ್ತು ನಿತಿನ್ ಕಾಳೆಯನ್ನು ಬಂಧಿಸಿದ್ದರು.
ನಿತಿನ್ ಮಾವನಾಗಿದ್ದ ಮೋಹನ್ ಮನೆಯಲ್ಲಿ ಪೊಲೀಸರು ಸುಮಾರು 650 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದರು. ಇದರಿಂದ ಆತಂಕಗೊಂಡ ಮೋಹನ್, ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂಬ ಭಯದಲ್ಲಿ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಸದ್ಯ ವಿ.ವಿ.ಪುರ ಪೊಲೀಸರು ಮೋಹನ್ ಮನೆ ಮತ್ತು ಕೇಶವ್ ಬಳಿಯಿಂದ ಸುಮಾರು 1.22 ಕೋಟಿ ಮೌಲ್ಯದ 1.5 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಉಂಡ ಮನೆಗೆ ದ್ರೋಹ ಬಗೆದ ಕೆಲಸದಾಕೆ ಅರೆಸ್ಟ್; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ - Gold ornaments stolen